ಅಂಗವಿಕಲನ ಬಾಳಿಗೆ ನರೇಗಾ ಬೆಳಕು

| Published : May 17 2025, 02:25 AM IST

ಸಾರಾಂಶ

ಫಕೀರಪ್ಪ ದುಡಿಯುವ ಉತ್ಸಾಹ, ಹುಮ್ಮಸ್ಸಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ನಿರೇರೆದಿದ್ದು, ಕಳೆದ 3 ವರ್ಷದಿಂದ ವಿಕಲಚೇತನರಿಗೆ ಇರುವ ಪ್ರತ್ಯೇಕ ಉದ್ಯೋಗ ಚೀಟಿಯ ಸೌಲಭ್ಯ ಪಡೆದುಕೊಂಡು ನರೇಗಾ ಕಾಮಗಾರಿಯಲ್ಲಿ ಸಕ್ರಿಯ ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಹುಟ್ಟಿನಿಂದಲೇ ಅಂಗವಿಕಲತೆ ಇದ್ದೂ ದುಡಿಯುವ ಛಲ ಮತ್ತು ಆತ್ಮವಿಶ್ವಾಸ ಹೊಂದಿದ ಯುವಕನ ಸ್ವಾವಲಂಬಿ ಬದುಕಿಗೆ ನರೇಗಾ ಯೋಜನೆ ಆಸರೆಯಾಗಿದೆ.

ತಾಲೂಕಿನ ಹನುಮಸಾಗರ ಹೋಬಳಿಯ ಕಾಟಾಪುರ ಗ್ರಾಪಂ ವ್ಯಾಪ್ತಿಯ ಬಂಡರಗಲ್ ನಿವಾಸಿ ವಿಕಲಚೇತನ ಫಕೀರಪ್ಪ ಮೇಟಿ (27) ಹುಟ್ಟಿನಿಂದ ಅಂಗವಿಕಲನಾದರೂ ಛಲಬಿಡದೇ ಬದುಕು ಕಟ್ಟಿಕೊಂಡಿದ್ದಾನೆ.

ದೇಹದ ಅಂಗವಿಕಲತೆ ಇದ್ದರೆ ಏನಂತೆ ಮನಸ್ಸು, ಆತ್ಮವಿಶ್ವಾಸ ಮಾತ್ರ ಗಟ್ಟಿಯಾಗಿದೆ. ಕೆಲವರು ದೈಹಿಕವಾಗಿ ಸದೃಢರಾಗಿದ್ದರೂ ಮಾನಸಿಕವಾಗಿ ಅಂಗವಿಕಲರಾಗಿರುತ್ತಾರೆ. ಅಂತಹವರ ಮಧ್ಯೆ ಫಕೀರಪ್ಪ ಮೇಟಿ ವಿಭಿನ್ನವಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಬಂಡರಗಲ್ ಗ್ರಾಮದ ನಿವಾಸಿಯಾದ ಫಕೀರಪ್ಪ ಅವರಿಗೆ ತಂದೆ-ತಾಯಿ, ಇಬ್ಬರು ಅಣ್ಣಂದಿರು ಇದ್ದಾರೆ. 8ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಈತನಿಗೆ ಯಾರೂ ಕೆಲಸ ನೀಡದೆ ಇದ್ದಾಗ ಗ್ರಾಮದಲ್ಲಿ ಚಿಕ್ಕ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ನಿತ್ಯ ₹ 200ರಿಂದ ₹ 225 ಲಾಭ ಗಳಿಸುವ ಮೂಲಕ ಕುಟುಂಬಸ್ಥರಿಗೆ ಆಸರೆಯಾಗಿದ್ದಾರೆ.

ಬದುಕಿಗೆ ನರೇಗಾ ಆಸರೆ:

ಫಕೀರಪ್ಪ ದುಡಿಯುವ ಉತ್ಸಾಹ, ಹುಮ್ಮಸ್ಸಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ನಿರೇರೆದಿದ್ದು, ಕಳೆದ 3 ವರ್ಷದಿಂದ ವಿಕಲಚೇತನರಿಗೆ ಇರುವ ಪ್ರತ್ಯೇಕ ಉದ್ಯೋಗ ಚೀಟಿಯ ಸೌಲಭ್ಯ ಪಡೆದುಕೊಂಡು ನರೇಗಾ ಕಾಮಗಾರಿಯಲ್ಲಿ ಸಕ್ರಿಯ ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಪಂನಿಂದ ಉದ್ಯೋಗ ಖಾತರಿ ಕೆಲಸ ನೀಡಿದಾಗಲೊಮ್ಮೆ ತಮ್ಮ ತಂದೆ-ತಾಯಿ ಜತೆಗೂಡಿ ಕೆಲಸಕ್ಕೆ ಬರುತ್ತಾರೆ. ತಮ್ಮೂರಿನ ಕೂಲಿಕಾರರೊಂದಿಗೆ ಕೆರೆ, ನಾಲಾ ಹೂಳೆತ್ತುವ ಕೆಲಸದಲ್ಲಿ ಭಾಗವಹಿಸಿ ಬದುಕು ಕಟ್ಟಿಕೊಂಡಿದ್ದಾರೆ.

ನಾನು ಉದ್ಯೋಗ ಖಾತರಿ ಯೋಜನೆಯಡಿ ಪ್ರತ್ಯೇಕ ಉದ್ಯೋಗ ಚೀಟಿ ಪಡೆದಿರುವೆ. ಜತೆಗೆ ನಮಗೆ ಕೆಲಸದಲ್ಲಿ ಶೇ. 50 ರಿಯಾಯಿತಿ ಸೌಲಭ್ಯವಿದ್ದು ಅನುಕೂಲವಾಗಿದೆ. ಗ್ರಾಮೀಣ ಭಾಗದ ಅಂಗವಿಕಲರಿಗೆ ಯೋಜನೆ ಉಪಯುಕ್ತವಾಗಿದೆ.

ಫಕೀರಪ್ಪ ಮೇಟಿ, ಅಂಗವಿಕಲ ಕೂಲಿಕಾರ