ಕೇಂದ್ರದಿಂದ ನರೇಗ ವೇತನ ಬಾಕಿ, ಪಿಡಬ್ಲ್ಯೂಡಿಗೆ ಕಾಲುಸಂಕ: ಹೆಬ್ಬಾಳ್ಕರ್

| Published : Jun 13 2024, 12:47 AM IST

ಕೇಂದ್ರದಿಂದ ನರೇಗ ವೇತನ ಬಾಕಿ, ಪಿಡಬ್ಲ್ಯೂಡಿಗೆ ಕಾಲುಸಂಕ: ಹೆಬ್ಬಾಳ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಸುಮಾರು 400 ಕಾಲು ಸಂಕಗಳ ಪುನಃ ನಿರ್ಮಾಣಕ್ಕೆ ಮುಖ್ಯಮಂತ್ರಿ ಲೋಕೋಪಯೋಗಿ ಇಲಾಖೆಗೆ ಆದೇಶಿಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಕೇಂದ್ರ ಸರ್ಕಾರ ವೇತನ ಬಾಕಿ ಇರಿಸಿದ್ದು, ಅವರಿಂದ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾಲು ಸಂಕಗಳ ನಿರ್ಮಾಣ ಕಾಮಗಾರಿಯನ್ನು ನರೇಗಾದಿಂದ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಮಹಿಳಾ - ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಸುಮಾರು 3 ತಿಂಗಳ ನಂತರ ಉಡುಪಿ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬುಧವಾರ ಮಳೆಗಾಲದ ಹಿನ್ನೆಲೆಯಲ್ಲಿ ತುರ್ತಾಗಿ ಅಧಿಕಾರಿಗಳ ಸಭೆ ನಡೆಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿರುವ ಸುಮಾರು 400 ಕಾಲುಸಂಕಗಳ ಪುನಃನಿರ್ಮಾಣಕ್ಕೆ ಮುಖ್ಯಮಂತ್ರಿ ಅವರು ಲೋಕೋಪಯೋಗಿ ಇಲಾಖೆಗೆ ಆದೇಶಿಸಿದ್ದಾರೆ ಎಂದರು.

ಕಳೆದ ವರ್ಷ ಮಳೆಗಾಲದಲ್ಲಿ ಕಾಲುಸಂಕ ಸೇತುವೆಗಳಿಂದಾಗಿ 5 ಮಕ್ಕಳ ದುರ್ಮರಣ ಹೊಂದಿದ್ದರು. ಈ ಬಾರಿ ಹಾಗಾಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕಡಲು ಕೊರೆತಕ್ಕೆ ತಲಾ 5 ಕೋಟಿ ರು.: ಕರಾವಳಿಯ ಕಡಲುಕೊರೆತ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಸಭೆ ನಡೆಸಲಾಗಿದ್ದು, ತಾತ್ಕಾಲಿಕ ಪರಿಹಾರಕ್ಕೆ 3 ಜಿಲ್ಲೆಗಳಿಗೆ ತಲಾ 5 ಕೋಟಿಯಂತೆ 15 ಕೋಟಿ ರು.ಗಳನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. ಶಾಶ್ವತ ಪರಿಹಾರಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧ ಇದೆ. ಆದರೆ ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಆಗಬೇಕಾದ ಯೋಜನೆ, ಕೇಂದ್ರ ಸರ್ಕಾರದ ಸಹಕಾರ ಬೇಕು, ನಾನು, ದ.ಕ. ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂ ರಾವ್ ಮತ್ತು ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಡೆಲ್ಲಿಗೆ ಹೋಗಿ ಈ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ಸಚಿವೆ ಹೇಳಿದರು.

ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜು ಕಳೆದ ವರ್ಷದಿಂದ ಮುಚ್ಚಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಚಿವೆ ಇದು ತಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ನಿರ್ಧಾರವಲ್ಲ. ಆದರೂ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದರು.

ಹೆಚ್ಚುವರಿ ಬಸ್ ಸೇವೆ: ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಬಸ್ಸು ಸೇವೆ ಅಲಭ್ಯದ ಬಗ್ಗೆ ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ರಾಜ್ಯದಲ್ಲಿಯೇ ಶಕ್ತಿ ಯೋಜನೆ ಬಳಿಕ ಸರ್ಕಾರಿ ಬಸ್ಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 209 ಸರ್ಕಾರಿ ಬಸ್ ರೂಟ್ ಪರವಾನಿಗೆಗಳಿವೆ. ಆದರೆ ಇಲ್ಲಿ ಖಾಸಗಿ ಬಸ್ ಗಳ ಹಾವಳಿ ಹೆಚ್ಚಾಗಿದೆ. ರಾಜ್ಯ ಸರ್ಕಾರ ಹೊಸದಾಗಿ 3000 ಬಸ್ಸುಗಳನ್ನು ಖರೀದಿಸುತ್ತಿದೆ. ಅವುಗಳಲ್ಲಿ ಉಡುಪಿ ಜಿಲ್ಲೆಗೂ ಬಸ್ಸುಗಳು ಲಭ್ಯವಾಗಲಿವೆ ಎಂದರು.

ಬಿಪಿಎಲ್ ಕಾರ್ಡ್ ವಿತರಣೆಯ ಸಮಸ್ಯೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಆರೋಗ್ಯ ಸಮಸ್ಯೆ ಇದ್ದವರಿಗೆ ತಕ್ಷಣ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಇತರರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಆಹಾರ ಮತ್ತು ನಾಗರಿಕ ಸೇವಾ ಸಚಿವರೇ ಉತ್ತರಿಸಬೇಕು ಎಂದರು.