ಸಾರಾಂಶ
ಕೊಪ್ಪಳ(ಯಲಬುರ್ಗಾ):
ಗ್ರಾಮೀಣ ಕೂಲಿಕಾರ್ಮಿಕರ ಬದುಕು ಸುಧಾರಣೆಗೆ ಉದ್ಯೋಗ ಖಾತ್ರಿ ಯೋಜನೆ ಅನುಕೂಲವಾಗಿದೆ ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಹೇಳಿದರು.ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿಗಳಾದ ನಾಲಾ ಸುಧಾರಣೆ, ಕೆರೆ ಹೂಳೆತ್ತುವುದು ಸೇರಿದಂತೆ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ದನದದೊಡ್ಡಿ ಕೆಲಸ ಮಾಡಿಕೊಳ್ಳುವ ಅವಕಾಶವಿದೆ. ಅಭಿವೃದ್ಧಿ ಕೆಲಸಗಳಿಂದ ಅಂತರ್ಜಲ ಮಟ್ಟ ಸುಧಾರಣೆ ಜತೆಗೆ ಕೂಲಿಕಾರರನ್ನು ಗುಳೆ ಹೋಗುವುದನ್ನು ತಪ್ಪಿಸಲಿದೆ ಎಂದರು. ಏ. ೧ರಿಂದ ನರೇಗಾ ಕೂಲಿ ಮೊತ್ತ ₹ ೩೭೦ ಆಗಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡಿ, ಪೂರ್ಣ ಪ್ರಮಾಣದ ಹಣ ಪಡೆಯಬೇಕು. ಉದ್ಯೋಗ ಖಾತ್ರಿ ಕೆಲಸಗಳ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಜಲ ಮೂಲಗಳ ಸಂರಕ್ಷಣೆ ಕೈಜೋಡಿಸಬೇಕು ಎಂದರು.
ಪಿಡಿಒ ಸೋಮಪ್ಪ ಪೂಜಾರ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನರೇಗಾ ಕಾಮಗಾರಿ ಆರಂಭಿಸಿದ್ದು ಜನರಿಗೆ ಆಸರೆಯಾಗಿದೆ. ಅನೇಕ ರೀತಿಯ ಕೆಲಸಗಳನ್ನು ನೀಡಿದ್ದು ಹೆಚ್ಚು ಲಾಭವನ್ನು ಜನರು ಪಡೆಯುತ್ತಿದ್ದಾರೆ ಎಂದು ಹೇಳಿದರು.ಗ್ರಾಪಂ ಸದಸ್ಯರಾದ ರವಿಕುಮಾರ ಭಾವಿಕಟ್ಟಿ, ಶಿವಮ್ಮ ಲೋಕನಗೌಡ ಪೊಲೀಸ್‌ಪಾಟೀಲ್, ಮುಖಂಡ ಮಹಾಂತೇಶ ವಾದಿ, ಗಣಕಯಂತ್ರ ನಿರ್ವಾಹಕ ಶೇಖರ ವಾದಿ, ಕಾಯಕ ಬಂಧುಗಳಾದ ರಾಮನಗೌಡ ಪಾಟೀಲ್, ಸಂಗಮೇಶ, ಜಿಕೆಎಂ ಶಾಂತಮ್ಮ ಅಂಗಡಿ, ಗ್ರಾಪಂ ಸಿಬ್ಬಂದಿ, ಕೂಲಿಕಾರರು ಹಾಗೂ ಗ್ರಾಮಸ್ಥರು ಇದ್ದರು.