ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನರೇಗಾ ಕಾಮಗಾರಿಗಳು ಕಳಪೆಯಾಗಿದ್ದು, ಈ ಬಗ್ಗೆ ಜಿಪಂ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಸರ್ಕಾರಿ ಹಣ ವಸೂಲಿ ಮಾಡುವಂತೆ ತಾಲೂಕಿನ ತಾಲೂಕಿನ ಅಣೆಚಾಕನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಗ್ರಾಮಸ್ಥರು ತೋರಿಸಿ ಗ್ರಾಮದ ತೊಪ್ಪಿನಕಟ್ಟೆ ಹೂಳೆತ್ತುವುದು ಮತ್ತು ಏರಿ ನಿರ್ಮಿಸುವ ನರೇಗಾ ಕಾಮಗಾರಿಯಲ್ಲಿ ಕಟ್ಟೆ ಒತ್ತುವರಿ ತೆರವು ಮಾಡದೆ ಹಳ್ಳಕ್ಕೆ ಅಡ್ಡಲಾಗಿ ನೀರು ಹರಿಯಲು ಅವೈಜ್ಞಾನಿಕವಾಗಿ ಎತ್ತರವಾಗಿ ಸೇತುವೆ ನಿರ್ಮಿಸಿ ಎತ್ತರದ ಮೇಲಭಾಗಕ್ಕೆ ಎರಡು ಪೈಪ್‌ಗಳನ್ನು ಹಾಕಿದ್ದಾರೆ. ಇದರಿಂದ ಸುತ್ತಮುತ್ತಲಿನ ರೈತರ ಜಮೀನಿಗಳು ಜಲಾವೃತಗೊಳ್ಳತ್ತಿವೆ. ಸೇತುವೆ ಕಾಮಗಾರಿ ಕೂಡ ಗುಣಮಟ್ಟದಲ್ಲಿ ನಡೆದಿಲ್ಲ. ಬಿರುಕು ಬಿಟ್ಟಿವೆ ಎಂದು ಆರೋಪಿಸಿದರು.ತೋಪ್ಪಿನಕಟ್ಟೆ ಕಟ್ಟೆ ತನ್ನ ಹಿಂದಿನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ಮೊದಲಿಗೆ ಹೂಳೆತ್ತಿ ಸೇತುವೆ ಮರು ನಿರ್ಮಿಸುವಂತೆ ಆಗ್ರಹಿಸಿದ ಗ್ರಾಮಸ್ಥರು ಗ್ರಾಮದಲ್ಲಿ ಸ್ಮಶಾನ ಜಾಗವಿಲ್ಲ. ಬಡ ನಿವೇಶನ ರೈತರಿಗೆ ಹಂಚಿರುವ ನಿವೇಶನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸೂಮಾರು ಆರೇಳು ಲಕ್ಷ ಹಣವನ್ನು ಅವ್ಯವಹಾರ ಮಾಡಿರುವುದಾಗಿ ದೂರಿದರು.
ಗ್ರಾಮದಲ್ಲಿ ಹೇಮಾವತಿ ಎಡದಂಡೆ ನಾಲೆಯ ವಿತರಣೆ ನಾಲೆ ಹರಿದು ಹೋಗಿದೆ. ಇದರಿಂದ ಜಮೀನಿಗೆ ನೀರಿನ ಸೌಲಭ್ಯ ಕಲ್ಪಿಸುವ ಸೀಳು ಕಾಲುವೆಗೆ ಸಿಮೆಂಟ್ ಪೈಪ್ ಅಳವಡಿಸಿ ಕಾಮಗಾರಿ ಬಿಲ್ ತೆಗೆದುಕೊಂಡ ನಂತರ ಸಿಮೆಂಟ್ ಪೈಪ್‌ಗಳನ್ನು ತೆಗೆದು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪೈಪ್‌ಗಳನ್ನು ಕೂಡ ಕಾಮಗಾರಿ ಸ್ಥಳದಲ್ಲಿ ಬಿಡದೆ ಹೊತ್ತೊಯ್ದಿದ್ದಾರೆ. ಸರ್ಕಾರಿ ಹಣವೂ ಉಪಯೋಗಕ್ಕೆ ಬರಲಿಲ್ಲ. ಪೈಪ್ ಉಳಿಯಲಿಲ್ಲ. ಕಾಮಗಾರಿ ಮುಗಿದು ವರ್ಷವೂ ಕಳೆದಿಲ್ಲ. ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು.
ಗ್ರಾಮದ ಖಾಸಗಿ ಅವರ ಜಮೀನಿನಲ್ಲಿ ಕಲ್ಯಾಣಿ ನಿರ್ಮಿಸಿದ್ದಾರೆ. ಕಲ್ಯಾಣಿ ನೀರನ್ನು ಶುದ್ಧಿಗೊಳಿಸುವ ಕೆಲಸವನ್ನು ಅಧಿಕಾರಿಗಳು ಮುಂದಾಗಿಲ್ಲ. ಕಲ್ಯಾಣಿ ನಿರ್ಮಾಣಕ್ಕೆ ಸರ್ಕಾರಿ ಹಣ 4 ಲಕ್ಷ ವೆಚ್ಚವಾಗಿದೆ. ನೀರು ಶುದ್ಧತೆ ಇಲ್ಲದ ಕಾರಣ ದೇವಸ್ಥಾನದ ಪೂಜೆಗೆ ಕಲ್ಯಾಣಿ ನೀರಿನ ಬದಲು ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದರು.ಕೂಡಲೇ ಅಧಿಕಾರಿಗಳು ಗ್ರಾಮದಲ್ಲಿ ನಡೆದಿರುವ ಎಲ್ಲ ಕಾಮಗಾರಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಜನರ ತೆರಿಗೆ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಗ್ರಾಮದ ಮುಖಂಡರಾದ ತಮ್ಮಣ್ಣ, ಪ್ರಸನ್ನ, ಸತೀಶ್, ಚಂದ್ರಹಾಸ್, ತೇಜು, ಮೂರ್ತಿ, ಉಮೇಶ್, ಮಂಜು, ಅರವಿಂದ್ ಸೇರಿದಂತೆ ಹಲವರಿದ್ದರು.