NSL Sugar factory fire accident: A major disaster that was missed
-ಕಬ್ಬಿನ ಸಿಪ್ಪೆ, ಬೆಲ್ಟ್ ಸೇರಿ ಸಲಕರಣೆಗಳಿಗೆ ಹಾನಿ । ಅರಣ್ಯ ಪ್ರದೇಶಕ್ಕೆ ಹರಡುವ ಆತಂಕ ದೂರ
--ಕನ್ನಡಪ್ರಭ ವಾರ್ತೆ ಆಳಂದ
ತಾಲೂಕಿನ ಭೂಸನೂರ ಬಳಿಯ ಸಹಕಾರಿ ಸಂಘದಿಂದ ಗುತ್ತಿಗೆ ಆಧಾರದ ಮೇಲೆ ಪಡೆದು ನಿರ್ವಹಿಸಲಾಗುತ್ತಿರುವ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಾರ್ಖಾನೆಯ ಕಾರ್ಮಿಕರ ಜಂಟಿ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.ಹಂಗಾಮಿಗೆ ಸಿದ್ಧತೆ ವೇಳೆ ಅವಘಡ:
ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆ ಸಿದ್ಧತೆ ನಡೆಸಿಕೊಂಡಿತ್ತು. ಕಳೆದ ಹಂಗಾಮಿನಲ್ಲಿ ಕಬ್ಬು ಅರೆದ ಬಳಿಕ ಉಳಿದ ಸಿಪ್ಪೆಯನ್ನು ಆವರಣದಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿತ್ತು. ಮಂಗಳವಾರ ಈ ಸಿಪ್ಪೆಗೆ ಅಕಸ್ಮಾತ್ ಬೆಂಕಿ ಹೊತ್ತಿಕೊಂಡಿದ್ದು, ವೇಗವಾಗಿ ಬೀಸುತ್ತಿದ್ದ ಗಾಳಿಯಿಂದ ಅದು ಹೆಚ್ಚಿನ ಪ್ರದೇಶಕ್ಕೆ ಹರಡಿತು. ವಿಷಯ ತಿಳಿದ ಕಾರ್ಖಾನೆಯ ಅಧಿಕಾರಿಗಳು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು.ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಬೆಂಕಿ ತೀವ್ರತೆ ಹೆಚ್ಚಿದ್ದರಿಂದ ಕಲಬುರಗಿಯಿಂದ ಮೂರು ಅಗ್ನಿಶಾಮಕ ವಾಹನಗಳನ್ನು ಕರೆಸಿಕೊಳ್ಳಲಾಯಿತು. ರಾತ್ರಿ 9 ಗಂಟೆಯವರೆಗೂ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು ಎಂದು ಹೇಳಲಾಗಿದೆ. ಆಳಂದ ಅಗ್ನಿಶಾಮಕ ಠಾಣೆಯ ಮಲ್ಲಿಕಾರ್ಜುನ ಹಾಗೂ ಕಲಬುರಗಿಯ ವಿಶ್ವನಾಥ ಅವರ ನೇತೃತ್ವದಲ್ಲಿ ಶಿವರಾಜ, ಸಿದ್ದಪ್ಪ, ಭೀಮಾಶಂಕರ, ಕಲ್ಲಪ್ಪ, ರಮೇಶ, ಸಿದ್ದರಾಮ, ಇಬ್ರಾಹಿಂ ಸೇರಿದಂತೆ 24 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸಲು ಶ್ರಮಿಸಿದರು.
ನಷ್ಟದ ಕುರಿತು ಸ್ಪಷ್ಟತೆ ಇಲ್ಲ:ಬೆಂಕಿಯಿಂದ ಕಬ್ಬಿನ ಸಿಪ್ಪೆಯ ಜೊತೆಗೆ ಕಾರ್ಖಾನೆಯ ಬೆಲ್ಟ್ ಹಾಗೂ ಇತರ ಕೆಲವು ಸಲಕರಣೆಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ. ಹಾನಿಗೊಳಗಾದ ವಸ್ತುಗಳ ಸಮೀಕ್ಷೆ ನಡೆಸಿ ನಷ್ಟದ ವರದಿ ಸಿದ್ಧಪಡಿಸಿದ ಬಳಿಕ ಮಾಹಿತಿ ನೀಡಲಾಗುವುದು ಎಂದು ಕಾರ್ಖಾನೆಯ ಆಡಳಿತ ಮಂಡಳಿ ತಿಳಿಸಿದೆ.
ಆದರೆ ಬುಧವಾರದವರೆಗೂ ನಷ್ಟದ ಪ್ರಮಾಣದ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ. ಇದೇ ವೇಳೆ, ಕಾರ್ಖಾನೆಯ ಸಿಬ್ಬಂದಿ ಕುಲಕರ್ಣಿ ಅವರು, ಬೆಂಕಿಯನ್ನು ತ್ವರಿತವಾಗಿ ನಂದಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಹಾಗೂ ಕಾರ್ಖಾನೆಗೆ ಯಾವುದೇ ನಷ್ಟವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.