ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳಿ

| Published : Mar 19 2025, 12:35 AM IST

ಸಾರಾಂಶ

ಶ್ರಮವಿಲ್ಲದೆ ಫಲವಿಲ್ಲ, ಸೇವೆ ಇಲ್ಲದೆ ಶ್ರೇಷ್ಠತೆ ಇಲ್ಲ

ಕನ್ನಡಪ್ರಭ ವಾರ್ತೆ ನಂಜನಗೂಡು

ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಿ ದೇಶದ ಸತ್ಪ್ರಜೆಗಳಾಗುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ರೂಪಿಸಿರುವ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ನಂಜನಗೂಡು ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಜಿ. ಮಹೇಶ್‌ ಕುರಹಟ್ಟಿ ಹೇಳಿದರು.

ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಸಿಂಧುವಳ್ಳಿ ಗ್ರಾಪಂ ವ್ಯಾಪ್ತಿಯ ಕುರಹಟ್ಟಿ ಗ್ರಾಮದಲ್ಲಿ ಸೇವೆ ಮತ್ತು ತ್ಯಾಗಕ್ಕಿಂತ ಹೆಚ್ಚಿನ ಶ್ರೇಷ್ಠತೆ ಇನ್ನೊಂದಿಲ್ಲ ಎಂಬ ಉಕ್ತಿಯಂತೆ 2024-25ನೇ ಸಾಲಿನ 7 ದಿನಗಳ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಬಿರದಲ್ಲಿ ಪಾಲ್ಗೊಂಡಿರುವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿ-ಸ್ವಯಂಸೇವಕರು ಸ್ವಚ್ಛತೆ, ಗ್ರಾಮ ನೈರ್ಮಲ್ಯ, ಶೌಚಾಲಯದ ಬಳಕೆ, ಕುಡಿಯುವ ನೀರಿನ ಸದ್ಬಳಕೆ, ಬಹಿರ್ದೆಸೆ ನಿರ್ಮೂಲನೆ ಹಾಗೂ ಆರೋಗ್ಯದ ಬಗ್ಗೆ ಗ್ರಾಮದ ಜನತೆಯಲ್ಲಿ ಅರಿವು ಮೂಡಿಸಿದರು.

ಶ್ರಮವಿಲ್ಲದೆ ಫಲವಿಲ್ಲ, ಸೇವೆ ಇಲ್ಲದೆ ಶ್ರೇಷ್ಠತೆ ಇಲ್ಲ ಎಂಬಂತೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಎಸ್. ಹೊನ್ನೇಗೌಡ ಪೂಜ್ಯಶ್ರೀಗಳವರ ಆಶೀರ್ವಾದ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳು ಎಲ್ಲರೊಂದಿಗೆ ಬೆರೆತು ನಿಯೋಜಿತ ಸೇವಾ ಕೈಂಕರ್ಯವನ್ನು ಪೂರ್ಣಗೊಳಿಸುವುದರ ಮುಖೇನ ವ್ಯಕ್ತಿಯಿಂದ ವ್ಯಕ್ತಿತ್ವಗಳಾಗಿ ರೂಪುಗೊಂಡು ಶಿಕ್ಷಣ ಸಂಸ್ಥೆಗೆ, ಗ್ರಾಮಸ್ಥರಿಗೆ ಹಾಗೂ ದೇಶಕ್ಕೆಕೀರ್ತಿ ಮತ್ತು ಯಶಸ್ಸನ್ನು ತರುವುದರೊಂದಿಗೆ ಮಾದರಿ ವಿದ್ಯಾರ್ಥಿಗಳಾಗಿ ಕಾಲೇಜಿಗೆ ಹಿಂದಿರುಗಲೆಂದು ಆಶಯನುಡಿಗಳನ್ನಾಡಿದರು.

ಶ್ರೀ ಗುರುಮಲ್ಲೇಶ್ವರ ಭಿಕ್ಷದ ಮಠದ ಶ್ರೀ ಮಾದಪ್ಪ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಶಿವಬಸಪ್ಪ ಅವರು ರಾಷ್ಟ್ರೀಯ ಸೇವಾ ಯೋಜನೆಯ ಉಗಮ, ಸೇವಾ ಪರಿಕಲ್ಪನೆ, ಸ್ವಯಂ ಸೇವಕರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕುರಿತಂತೆ ಮಾಹಿತಿ ನೀಡಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಸಿ. ಸುಬ್ಬಣ್ಣ, ಡಾ.ಎನ್.ಜಿ. ಲೋಕೇಶ್, ಹೊಣಕಾರ್ ನಾಯಕ, ಕೆ.ಪಿ. ಶಾಂತಮಲ್ಲು, ಲತಾಬಸಪ್ಪ, ನಾಗಮ್ಮ ಗಣೇಶನಾಯ್ಕ, ಹೊನ್ನಪ್ಪ, ಗೌಡಿಕೆ ಗುರುಮಲ್ಲಪ್ಪ, ಪುಟ್ಟಸ್ವಾಮಿ, ಮುಖ್ಯಶಿಕ್ಷಕ ಚಿಕ್ಕಮಹದೇವಯ್ಯ, ಮಂಗಳಮ್ಮ, ಟ್ಟಿಗ್ರಾಮದ ಮುಖಂಡರು ಇದ್ದರು.

ಸ್ವಯಂಸೇವಕಿಯರಾದ ಮಹೇಶ್ವರಿ ಮತ್ತು ತಂಡ ಪ್ರಾರ್ಥಿಸಿದರು, ಕಾರ್ಯಕ್ರಮಾಧಿಕಾರಿ ಎಚ್‌.ಆರ್‌. ಗುರು ಸ್ವಾಗತಿಸಿದರು, ಸಹ ಶಿಬಿರಾಧಿಕಾರಿ ಸುನೀಲ್‌ ಕುಮಾರ್ ವಂದಿಸಿದರು ಹಾಗೂ ಮಂಜುಶ್ರೀ ನಿರೂಪಿಸಿದರು.