ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಕಡಗದಾಳು ಪ್ರೌಢಶಾಲೆಯಲ್ಲಿ ನಡೆಯಿತು.

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಕಡಗದಾಳು ಪ್ರೌಢಶಾಲೆಯಲ್ಲಿ ನಡೆಯಿತು.ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಉದ್ಘಾಟಿಸಿ, ಎನ್ ಎಸ್ ಎಸ್ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ನಮ್ಮತನವನ್ನು ರೂಪಿಸಿಕೊಳ್ಳುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ನನಗಲ್ಲ ನಿನಗೆ ಎನ್ನುವುದು ನಮ್ಮ ಬದುಕಿಗೆ ಬಹಳ ಮುಖ್ಯ, ಈ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಮತ್ತೊಬ್ಬರಿಗೆ ಆದರ್ಶ ವ್ಯಕ್ತಿತ್ವವನ್ನು ನಾವು ಗಳಿಸಿಕೊಳ್ಳಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ, ಕ್ಯಾಪಿಟಲ್ ವಿಲೇಜ್ ಮಾಲಿಕರಾದ ಬೊಟ್ಟೋಳಂಡ ದೇವಯ್ಯ ಮಾತನಾಡಿ, ಎನ್ ಎಸ್ ಎಸ್ ಶಿಸ್ತು ಹಾಗು ಸ್ವಚ್ಛತೆಗೆ ಹೆಸರುವಾಸಿ, ಎನ್ ಎಸ್ ಎಸ್ ಸ್ವಯಂಸೇವಕರು ಸದಾ ಸಾರ್ವಜನಿಕ ಸೇವೆಗೆ ಸಿದ್ಧರಾಗಿರುತ್ತಾರೆ ಎಂದರು.ಅತಿಥಿ ಪ್ರಮೀಳಾ ಶೆಟ್ಟಿ ಮಾತನಾಡಿ, ಯುವಜನತೆ ಸಮಾಜದ ವಾಸ್ತವತೆಗೆ ತಕ್ಕಂತೆ ಬದಲಾಗಬೇಕು ಹಾಗು ಸಾರ್ವಜನಿಕ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಿಡಬೇಕು. ಯುವಜನತೆಯನ್ನು ವಿನೂತನ ಚಟುವಟಿಕೆಗಳಿಗೆ ಒಳಪಡಿಸಬೇಕು ಅನ್ನುವ ಕಾರಣಕ್ಕೆ ಮತ್ತೋರ್ವ ಅತಿಥಿ ಸ್ಮಿತಾ ಚೆಂಗಪ್ಪ ಎನ್ ಎಸ್ ಎಸ್ ನ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಗು ಸ್ವಚ್ಛತೆಯ ಕುರಿತು ಹೆಚ್ಚಿನ ಗಮನಹರಿಸಬೇಕು, ಸಾರ್ವಜನಿಕರಿಗೆ ಈ ವಿಚಾರವಾಗಿ ಅರಿವು ಮೂಡಿಸಬೇಕು ಎಂದರು.ಪ್ರೊಫೇಸರ್ ತಿಪ್ಪೆಸ್ವಾಮಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಯುವಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯವಾಗುತ್ತದೆ ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ, ಸಮಾಜದಲ್ಲಿ ಎನ್ ಎಸ್ ಎಸ್ ಗೆ ಇರುವ ಪ್ರಾಮುಖ್ಯತೆ, ಎನ್ ಎಸ್ ಎಸ್ ನಿಂದ ವಿದ್ಯಾರ್ಥಿಗಳ ಬದುಕಿಗೆ ಸಿಗುವ ಜೀವನ ಪಾಠ, ಸಮಾಜದಲ್ಲಿ ಅಸಹಾಯಕರಿಗೆ ನೆರವಾಗುವಂತದ್ದು, ಸ್ವಚ್ಛ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊಫೆಸರ್ ರಾಘವ ಬಿ. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಮಾಜ ಸೇವೆ ಮಾಡಲು ನೈತಿಕ ಸ್ಥೈರ್ಯ ನೀಡುವುದೇ ಎನ್ ಎಸ್ ಎಸ್. ನನಗಲ್ಲ ನಿನಗೆ ಎನ್ನುವುದು ವೈಯಕ್ತಿಕ ಪ್ರಗತಿಯೊಂದಿಗೆ ಸಾಮಾಜಿಕ ಪ್ರಗತಿಗೆ ಅವಕಾಶ ನೀಡುತ್ತದೆ, ನಾಯಕತ್ವವನ್ನು ಬೆಳೆಸುವಲ್ಲಿ ಎನ್ ಎಸ್ ಎಸ್ ಪಾತ್ರ ಬಹಳಾ ದೊಡ್ಡದು. ಶಿಕ್ಷಣ, ಜ್ಞಾನವನ್ನು ತರಗತಿಯ ಒಳಗೆ ಕಲಿತರೆ ಸಾಮಾಜಿಕ ಜೀವನವನ್ನು ರಾಷ್ಟ್ರೀಯ ಸೇವಾ ಯೋಜನೆ ಕಲಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ಹಂಚಿದರು.ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ. ಶೈಲಶ್ರೀ, ಅಲೋಕ್ ಬಿಜೈ, ಶಿಬಿರಾಧಿಕಾರಿಗಳಾದ ಡಾ. ಪ್ರದೀಪ್ ಭಂಡಾರಿ, ಡಾ. ರೇಣುಶ್ರೀ, ಡಾ. ಸೌಮ್ಯ, ಶರತ್ ಪಿ.ಜಿ, ಮೋನಿಶಾ, ಹಾಜರಿದ್ದರು. ಕಾರ್ಯಕ್ರಮದಲ್ಲಿ ಅಶ್ವಿತಾ ಸ್ವಾಗತಿಸಿ, ಸುಶ್ಮಿತಾ ವಂದಿಸಿ, ಶೃಂಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.