ಅಂಜುಮನ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಕಿತ್ರೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 7 ದಿನಗಳ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವನ್ನು ಊರಿನ ಮುಖಂಡ ಗಣಪಯ್ಯ ಗೊಂಡ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಭಟ್ಕಳ
ಅಂಜುಮನ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಕಿತ್ರೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 7 ದಿನಗಳ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವನ್ನು ಊರಿನ ಮುಖಂಡ ಗಣಪಯ್ಯ ಗೊಂಡ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಕಿತ್ರೆಯಂತಹ ಗ್ರಾಮೀಣ ಭಾಗದಲ್ಲಿ ಎನ್ನೆಸ್ಸೆಎಸ್ ಶಿಬಿರ ಆಯೋಜಿಸಿರುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಆಚಾರ, ವಿಚಾರದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದರು. ಸ್ವಯಂಸೇವಕರು ಟೀಂ ಎಂಜಿಲ್, ಗರ್ಲ್ಸ್ ಸ್ಕ್ವಾಡ್, ಬಟರ್‌ಫ್ಲೈ ಮತ್ತು ಕಿಂಗ್ ಮೇಕರ್ ಎಂಬ ನಾಲ್ಕು ತಂಡಗಳಾಗಿ ವಿಭಜಿತರಾಗಿ ಶ್ರಮದಾನ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಶಾಲೆಯ ಮುಂದೆ ಕಣ್ಮರೆಯಾಗಿದ್ದ ಗಟಾರ ಪುನರ್ ನಿರ್ಮಾಣ, ರಸ್ತೆಯ ಬದಿಗಳ ಗಿಡಗಂಟಿ ತೆರವು, ಶಾಲೆಯ ಹೂವುದೋಟ ಸುಧಾರಣೆ, ಬಸ್ ತಂಗುದಾಣದ ಸ್ವಚ್ಛತೆ ಹಾಗೂ ಶಾಲೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದ ಹಳ್ಳದ ಸ್ವಚ್ಛತಾ ಕಾರ್ಯಗಳನ್ನು ಅವರು ಕೈಗೊಂಡರು. ಸಭಾಭವನ ಮತ್ತು ಸುತ್ತಮುತ್ತಲಿನ ಪ್ರದೇಶದ ಸುಂದರೀಕರಣವೂ ಈ ಶಿಬಿರದ ಮುಖ್ಯ ಆಕರ್ಷಣೆಗಳಾಗಿತ್ತು.
ಗ್ರಾಮಸ್ಥರೊಂದಿಗೆ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಬಾಂಧವ್ಯ ವೃದ್ಧಿಸಲಾಯಿತು. ಶಿಬಿರದ ಮಾಹಿತಿ ಚಟುವಟಿಕೆಗಳ ಅಂಗವಾಗಿ ಡಾ. ದೇವಿದಾಸ ಪ್ರಭು, ಇನ್‌ಸ್ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿ, ವಸಂತ ದೇವಾಡಿಗ, ಪ್ರೊ. ಆರ್.ಎಸ್. ನಾಯಕ, ಪ್ರೊ. ಮಂಜುನಾಥ ಪ್ರಭು ಹಾಗೂ ಪುರಸಭೆಯ ಸೋಜಿಯಾ ಸೋಮನ್ ಸ್ವಯಂಸೇವಕರಿಗೆ ವಿಭಿನ್ನ ವಿಷಯಗಳ ಕುರಿತು ಉಪನ್ಯಾಸ ನೀಡಿದರು.ಸ್ಪರ್ಧಾತ್ಮಕ ಚಟುವಟಿಕೆಗಳ ಅಂತ್ಯದಲ್ಲಿ ಟೀಂ ಎಂಜಿಲ್ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ದಾಕ್ಷಾಯಿಣಿ ನಾಯ್ಕ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರೆ, ಬಿಎ ಐದನೇ ಸೆಮಿಸ್ಟರ್‌ನ ಆರೀಫ್ ಖಾನ್ ಗೆ ಉತ್ತಮ ಸ್ವಯಂ ಸೇವಕ ಪ್ರಶಸ್ತಿ ಲಭಿಸಿತು.
ಶಿಬಿರ ಎನ್.ಎಸ್.ಎಸ್. ಅಧಿಕಾರಿ ದಾಮೋದರ ನಾಯ್ಕ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು. ಸಮಾರೋಪ ಸಮಾರಂಭಕ್ಕೆ ಭಟ್ಕಳ ಮುಸ್ಲಿಂ ಯುವಕ ಫೆಡರೇಶನ್‌ನ ಜನರಲ್ ಸೆಕ್ರೆಟರಿ ಮುಭಾಶಿರ್ ಹಲ್ಲಾರೆ, ಪ್ರೊ. ಬಿ.ಎಚ್. ನದಾಫ್, ಪ್ರೊ. ಆರ್.ಎಸ್. ನಾಯಕ, ಪ್ರೊ. ಉಮೇಶ್ ಮೇಸ್ತ ಹಾಗೂ ಗಣಪಯ್ಯ ಗೊಂಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಶಿಬಿರ ಸ್ವಯಂಸೇವಕರ ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿತು.