ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್‌ ಶಿಬಿರ ಸಹಕಾರಿ: ಡಾ.ಮಂತರ್ ಗೌಡ

| Published : Sep 29 2024, 01:50 AM IST

ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್‌ ಶಿಬಿರ ಸಹಕಾರಿ: ಡಾ.ಮಂತರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜೀವನ ಬದಲಾವಣೆಗೊಳ್ಳಲು ಎನ್‌ಎಸ್‌ಎಸ್‌ ಶಿಬಿರ ಸಹಕಾರಿ ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜೀವನ ಬದಲಾವಣೆಗೊಳ್ಳಲು ಎನ್‌ಎಸ್‌ಎಸ್ ಶಿಬಿರ ಸಹಕಾರಿ. ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು ಸಂಘಟನೆ ನಾಯಕತ್ವದ ಗುಣಗಳನ್ನು ಹೆಚ್ಚಿಸುವುದರ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಈ ಶಿಬಿರವು ಸಹಕಾರಿಯಾಗಲಿ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು.

ಮಾದಾಪುರ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ 7 ದಿನಗಳ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ಹಿರಿಯರು ನೀಡಿದ ವಿದ್ಯಾಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ನನಗೆ ಬಹಳಷ್ಟು ಆನಂದದಾಯಕ ವಿಚಾರವಾಗಿದೆ ಎಂದರು.

ಹಾಗೆಯೇ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಈ ಶಿಬಿರಾರ್ಥಿಗಳು ಮಾಡಬೇಕೆಂದು ಶಾಸಕರು ಹೇಳಿದರು. ಹಲವು ಕಡೆಗಳಲ್ಲಿ ಬೇಕರಿ ಮತ್ತು ಹೋಟೆಲ್‌ಗಳು ಅಶುಚ್ಚಿತ್ವ ತಾಂಡವವಾಡುತ್ತಿದ್ದು ಅಂತಹ ಸ್ಥಳಗಳಿಗೆ ಭೇಟಿ ನೀಡಿ ಅವರಿಗೂ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಶಿಬಿರಾರ್ಥಿಗಳು ಮನವರಿಕೆ ಮಾಡಿಕೊಡಬೇಕು ಎಂದು ಅವರು ಹೇಳಿದರು.

ಅಲ್ಲದೆ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಅದರಿಂದ ನಿಮ್ಮ ದೇಹಕ್ಕೆ ಆಗುವ ದುಷ್ಪಾರಿಣಾಮಗಳ ಎಚ್ಚರದಿಂದಿರಬೇಕು, ದೇಶದ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಪೈಪೋಟಿ ಹೆಚ್ಚಾಗಿದ್ದು, ಈ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಕರೆ ನೀಡಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಆರ್. ಸುನಿಲ್ ಕುಮಾರ್ ಮಾತನಾಡಿ, ಸಮರ್ಪಣ ಭಾವನೆ ಶಾಲಾಮಟ್ಟದಲ್ಲಿ ಬರಬೇಕಾಗಿದೆ. ಸಮಾಜಕ್ಕೆ ನಾವು ಏನನ್ನು ಸಮರ್ಪಣೆ ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ದೂರದ ಮಾದಾಪುರದಿಂದ ಸುಂಟಿಕೊಪ್ಪಕ್ಕೆ ಬಂದು ಇಲ್ಲಿ ಶುಚಿತ್ವ ಮತ್ತು ಶ್ರಮದಾನ ಮಾಡಲು ಆಗಮಿಸಿರುವುದರಿಂದ ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ಬೆಂಬಲವನ್ನು ಮತ್ತು ಸಹಕಾರವನ್ನು ನೀಡಲಿದೆ ಎಂದು ಈ ಸಂದರ್ಭ ತಿಳಿಸಿದರು. ಶಿಕ್ಷಣದ ಜೊತೆಯಲ್ಲಿ ದೈಹಿಕವಾಗಿ ಸದೃಢರಾಗಿ ಇರಬೇಕು ಎಂದು ಅವರು ತಿಳಿಸಿದರು.

ಕೊಡಗು ಜಿಲ್ಲಾಧಿಕಾರಿ, ಕಾನೂನು ಸಲಹೆಗಾರದ ಎ. ಲೋಕೇಶ್ ಕುಮಾರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎಂಬುದು ಸರ್ಕಾರದ ಪ್ರಾಯೋಗಿಕ ಸಾಮಾಜಿಕ ಸಂಸ್ಥೆಯಾಗಿದ್ದು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಲ್ಲದೆ ಎನ್‌ಎಸ್‌ಎಸ್ ಶಿಬಿರದ ಉದ್ದೇಶ ಮತ್ತು ಲಾಭದ ಬಗ್ಗೆ ಶಿಬಿರಾರ್ಥಿಗಳಿಗೆ ಸವಿಸ್ತಾರವಾದ ಮಾಹಿತಿಯನ್ನು ವಿವರಿಸಿದರು.

ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಮಾತನಾಡಿ, ಕಲಿಕೆಯ ಜೊತೆಗೆ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬೇಕು. ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಕಾಣಿಸಿಕೊಳ್ಳಬೇಕಾದರೆ ನಾಯಕತ್ವದ ಗುಣ ಬೇಕಾಗಿದೆ. ಹಿಂಜರಿಕೆಯನ್ನು ಬಿಟ್ಟು ಎಲ್ಲ ವಿಚಾರಗಳಲ್ಲೂ ಮುನ್ನುಗ್ಗಿ ಅದನ್ನ ಪರಿಹರಿಸುವ ಕೆಲಸ ಮಾಡಬೇಕಾಗಿದೆ ಹಾಗೂ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಲತಾ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಖಾನ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಂದಪ್ಪ ಸಿ.ಜಿ. ವಹಿಸಿದ್ದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಮ್ಮ ಮಹೇಶ್, ಪಂ. ಸದಸ್ಯ ಐ.ಸೋಮನಾಥ್, ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಿರಿಲ್ ರಾಡ್ರಿಗಸ್ ಉಪಸ್ಥಿತರಿದ್ದರು.

ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಗೀತೆಯನ್ನು ಹಾಡಿದರು. ಮೋಹನ್ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು, ಉಪನ್ಯಾಸಕಿ ಪ್ರಮೀಳಾ ನಿರೂಪಿಸಿದರು.