ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಶಾಲಾ ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗದ ವೇಳೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೇರಿಕೊಂಡು ಸಾಮಾಜಿಕ ಸೇವೆಗಳಲ್ಲಿ ತೊಡಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕ ಎಂ.ಎಸ್.ಮಹೇಶ್ ಬಾಬು ತಿಳಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರಾಜ್ಯ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ, ಮೈಸೂರು ವಿಶ್ವವಿದ್ಯಾನಿಲಯ ಹಲಗೂರು ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಮತ್ತು ತೃತೀಯ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಅತ್ಯುತ್ತಮ ಸಂಸ್ಕೃತಿಯಾಗಿದೆ. ನಮ್ಮ ಆಚಾರ ವಿಚಾರ, ನಡೆ-ನುಡಿ, ಆಹಾರ ಪದ್ಧತಿ, ವೇಷ ಭೂಷಣ ಇವೆಲ್ಲವನ್ನು ನಮ್ಮನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳು ಜೀವನ ಪಾಠ ಪ್ರವಚನಗಳಿಗೆ ಸೀಮಿತವಾಗದೆ ಇತರ ಸಾಂಸ್ಕೃತಿಕ ಸಾಮಾಜಿಕ ಚಟುವಟಿಕೆಗಳಿಂದ ಕೂಡಿ ಶಾಲೆಯಿಂದ ಹೊರ ಹೋಗುವಾಗ ಒಂದು ಪರಿಪೂರ್ಣ ವ್ಯಕ್ತಿತ್ವವಾಗಬೇಕು ಎಂದರು.ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಮಾತನಾಡಿ, ಜೀವನದಲ್ಲಿ ಒಂದು ಶೈಕ್ಷಣಿಕ ಅರ್ಹತೆಗಾಗಿ ಪದವಿ ಪಡೆದು ಭವಿಷ್ಯದಲ್ಲಿ ಬರುವ ಹಲವಾರು ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಸಜ್ಜಾಗುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಬೇಕಾದ ಸಲಹೆ ಸೂಚನೆಗಳನ್ನು ನಮ್ಮ ಬೋಧಕ ವರ್ಗ ನೀಡಲು ಅನುಕೂಲವಾಗುವಂತಹ ವೇದಿಕೆ ನಿರ್ಮಾಣ ಮಾಡುವುದು ಈ ಶಾಲಾ ವಾರ್ಷಿಕೋತ್ಸವದ ಉದ್ದೇಶವಾಗಿದೆ ಎಂದರು.
ಈ ಕಾಲೇಜಿನಲ್ಲಿ ನಿಮ್ಮ ಶೈಕ್ಷಣಿಕ ಜೀವನದ ಅವಿಸ್ಮರಣೀ. ಘಟನೆಗಳಿಗೆ ಮುಕ್ತಾಯ ನೀಡುವ ಕ್ಷಣ ಈ ವಾರ್ಷಿಕೋತ್ಸವ. ಪದವಿ ನಂತರದ ನಿಮ್ಮ ಉನ್ನತ ಶೈಕ್ಷಣಿಕ ಜೀವನ ಉಜ್ವಲವಾಗಿರಲಿ. ಮುಂದಿನ ಸ್ಪರ್ಧಾತ್ಮಕ ಜಗತ್ತು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ ಎಂದರು.ನಿಮ್ಮ ಜೀವನ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಾಗದೆ ನೀವು ಇಚ್ಚಾ ವೃತ್ತಿಯನ್ನು ಆರಿಸಿಕೊಳ್ಳಲು ಸನದ್ಧರಾಗಬೇಕು. ನೀವೆಲ್ಲರೂ ಕ್ರಿಯಾಶೀಲ ಹಾಗೂ ಪ್ರತಿಭಾವಂತರಾಗಿದ್ದು ತಮ್ಮ ಪ್ರತಿಭೆ ತೋರಲು ಉತ್ತಮ ಅವಕಾಶ ಸಿಗಲಿ ಎಂದು ಹಾರೈಸಿದರು.
ಈ ವೇಳೆ ಕಾಲೇಜಿನಲ್ಲಿ ನಡೆಸಿದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು, ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಕನ್ನಡ ವಿಭಾಗದ ಎನ್.ಎಸ್.ಶಂಕರೇಗೌಡ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಸುಧಾಬಿದರಿ, ಸಿ ಬಿ .ಜಗದೀಶ್, ಭರತ್ ರಾಜ ಅರಸ್, ಚಂದ್ರು ಕುಮಾರಸ್ವಾಮಿ ,ಸಂತೋಷ್ ನಾಯಕ್ ಮತ್ತು ಇತರರು ಇದ್ದರು.