ನರಸಿಂಹರಾಜಪುರಎನ್.ಎಸ್.ಎಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಣ ಜೊತೆ ಜೊತೆಗೆ ಜೀವನ ಶಿಕ್ಷಣವೂ ಸಿಗುತ್ತದೆ ಎಂದು ಮಂಡಲ ಮಾಜಿ ಪ್ರಧಾನ ಎಸ್.ಡಿ.ವಿ. ಗೋಪಾಲರಾವ್ ಅಭಿಮತ ವ್ಯಕ್ತಪಡಿಸಿದರು.

- ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಎನ್.ಎಸ್.ಎಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಣ ಜೊತೆ ಜೊತೆಗೆ ಜೀವನ ಶಿಕ್ಷಣವೂ ಸಿಗುತ್ತದೆ ಎಂದು ಮಂಡಲ ಮಾಜಿ ಪ್ರಧಾನ ಎಸ್.ಡಿ.ವಿ. ಗೋಪಾಲರಾವ್ ಅಭಿಮತ ವ್ಯಕ್ತಪಡಿಸಿದರು.

ಶನಿವಾರ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು. ನಾವು ಮಾಡಿದ ಸೇವೆ ಜೀವನ ಪರ್ಯಂತ ಇರಲಿದೆ. ದೇಶ ಕಟ್ಟಬೇಕಾದರೆ ಯುವ ಜನರಿಂದ ಮಾತ್ರ ಸಾಧ್ಯವಾಗುತ್ತದೆ. ನಾನು ಚಿಕ್ಕ ಹುಡುಗ ನಾಗಿದ್ದಾಗ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಭಾಗವಹಿಸಿದ್ದೆ ಎಂದು ನೆನಪಿಸಿಕೊಂಡರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಎನ್.ಎಸ್.ಎಸ್.ಶಿಬಿರದಿಂದ ನಾಲ್ಕು ಗೋಡೆಗಳ ಶಿಕ್ಷಣದ ಜೊತೆಗೆ ಗ್ರಾಮಸ್ಥರ ಅನುಭವದ ಶಿಕ್ಷಣ ನಿಮಗೆ ಸಿಗಲಿದೆ. ಜೀವನ ಕೌಶಲ್ಯ ಕಲಿಯಬಹುದು. ಗ್ರಾಮದ ಪರಿಸರ, ಗ್ರಾಮಗಳ ಜನರ ಒಡನಾಟ, 7 ದಿನಗಳ ಕಾಲ ನಡೆಯುವ ಘಟನೆಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಅನುಭವದ ಪಾಠ ದೊಡ್ಡ ಶಿಕ್ಷಣ ವಿದ್ದಂತೆ. ಶಿಬಿರಾರ್ಥಿಗಳು ಇಲ್ಲಿನ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಒಳ್ಳೆಯ ಹೆಸರು ಪಡೆಯಬೇಕು. ನಾನು 18 ಎನ್.ಎಸ್.ಎಸ್.ಶಿಬಿರಗಳಲ್ಲಿ ಭಾಗವಹಿಸಿದ್ದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸೀತೂರು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಇ. ದಿವಾಕರ ಮಾತನಾಡಿ, ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದವರು ಸೀತೂರು ಶಾಲೆಯಲ್ಲಿ ಶಿಬಿರ ಮಾಡುತ್ತಿರುವುದಕ್ಕೆ ಸೀತೂರು ಗ್ರಾಮ ಪಂಚಾಯಿತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹಂತ ಬಂದಿರುವುದು ವಿಷಾದಕರವಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿತವರು ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ ಎಂದು ಹೇಳಿದರು.

ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮ, ಸೀತೂರು ಶಾಲೆ ಎಸ್.ಡಿಎಂಸಿ ಅಧ್ಯಕ್ಷೆ ಜ್ಯೋತಿ, ಸದಸ್ಯೆ ನೇತ್ರಾವತಿ, ಶಾಲಾ ಮುಖ್ಯೋಪಾಧ್ಯಾಯ ಬಸಪ್ಪ, ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ನಿರ್ವಹಣಾ ವಿಭಾಗದ ಮುಖ್ಯಸ್ಥ ಸತೀಶ್, ಗ್ರಾಮ ಪಂಚಾಯಿತಿ ಗ್ರಂಥ ಪಾಲಕ ದಿನೇಶ್, ಕಾಲೇಜಿನ ಪ್ರಾಧ್ಯಾಪಕರಾದ ದಿನಕರ ನಾಯ್ಕ್, ಅಶೋಕ್, ಎಸ್.ಎಸ್.ಎಸ್.ಶಿಬಿರಾಧಿಕಾರಿಗಳಾದ ಸತೀಶ್ ನಾಯ್ಕ್, ಶಂಕರನಾಯ್ಕ್ ಇದ್ದರು.ಕು.ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.