ನಾಯಕತ್ವ ಗುಣ ಬೆಳೆಸಲು ಎನ್‌ಎಸ್‌ಎಸ್ ಸಹಕಾರಿ: ಡಾ. ಚಂದ್ರು ಲಮಾಣಿ

| Published : Mar 28 2025, 12:35 AM IST

ಸಾರಾಂಶ

ಶ್ರೀ ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ವತಿಯಿಂದ ಶಿರಹಟ್ಟಿ ತಾಲೂಕಿನ ಶ್ರೀಮಂತಗಡದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ೨೦೨೪-೨೫ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು.

ಶಿರಹಟ್ಟಿ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದರಿಂದ ನಾಯಕತ್ವದ ಗುಣ, ಶಿಸ್ತು, ಸಮಯ ಪ್ರಜ್ಞೆಯನ್ನು ಕಲಿಯಬಹುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಶ್ರೀ ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ವತಿಯಿಂದ ತಾಲೂಕಿನ ಶ್ರೀಮಂತಗಡದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ೨೦೨೪-೨೫ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದ್ದು, ಯುವಶಕ್ತಿ ಮತ್ತು ಸಾಮರ್ಥ್ಯವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವ ಮೂಲಕ ಅವರಲ್ಲಿ ಸಮುದಾಯ ಸೇವೆಯ ಉತ್ಸಾಹವನ್ನು ಮೂಡಿಸುತ್ತಿದೆ. ವಿದ್ಯಾರ್ಥಿಗಳು ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಬೆಳಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದರು.ಯುವಕರು ಸಮಾಜದ ಕಣ್ಣುಗಳಾಗಿ ರಾಷ್ಟ್ರದ ಆಸ್ತಿಯಾಗಬೇಕು. ವಿಶ್ವದಲ್ಲೇ ಭಾರತ ಉತ್ತಮ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವ ಸಂದರ್ಭದಲ್ಲಿ ಇಂದಿನ ಯುವಜನರು ರಾಷ್ಟ್ರದ ಸತ್ಪ್ರಜೆಗಳಾಗಬೇಕು. ವೈಜ್ಞಾನಿಕ ಜಗತ್ತು ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವ ಸಂದರ್ಭದಲ್ಲಿ ದೇಶವು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ದುಡಿಯಬೇಕೆಂದು ಕರೆ ನೀಡಿದರು.ವಿದ್ಯಾರ್ಥಿಗಳಿಗೆ ಸಮುದಾಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರಲ್ಲಿನ ನಾಯಕತ್ವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಲಿದೆ. ಯೋಜನೆಯ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವೆಯ ಮನೋಭಾವವನ್ನು ಬೆಳೆಸುವುದು ಮತ್ತು ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಒದಗಿಸಿ ಕೊಡುವುದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಪ್ರಾಂಶುಪಾಲರಾದ ಡಾ. ಉಮೇಶ ಅರಹುಣಸಿ ಮಾತನಾಡಿ, ವಿದ್ಯಾರ್ಥಿ ಯುವಜನರು ದುಶ್ಚಟಗಳಿಗೆ ದಾಸರಾಗಿ ತಮ್ಮನ್ನು ತಾವೇ ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ದುಶ್ಚಟಗಳಿಂದ ಹೊರ ಬಂದು ಉತ್ತಮವಾಗಿ ಓದಿ ಗ್ರಾಮಾಂತರ ಪ್ರದೇಶದ ಮಕ್ಕಳು ಮುಂದೆ ಬರಬೇಕು ಎಂದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ''''ಯ ವಾರ್ಷಿಕ ವಿಶೇಷ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಕ್ರಿಯಾಶೀಲತೆ ಮೂಡಿಸುತ್ತದೆ. ಅದನ್ನು ಅರಿತುಕೊಂಡು ಕಾರ್ಯಪ್ರವೃತ್ತರಾಗಿ ದೇಶ ಮತ್ತು ಸಮಾಜಕ್ಕೆ ಮೌಲ್ಯಯುತವಾದ ಕೊಡುಗೆ ನೀಡಬೇಕು ಎಂದು ಕರೆ ಕೊಟ್ಟರು.

ರಣತೂರ ಗ್ರಾಪಂ ಉಪಾಧ್ಯಕ್ಷ ಸಂತೋಷ ಓಬಾಜಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ. ವಿದ್ಯಾರ್ಥಿಗಳು ದುರಾಭ್ಯಾಸದಿಂದ ದೂರವಿದ್ದು ದೇಶದ ಉತ್ತಮ ಪ್ರಜೆಯಾಗಿ ಸಮಾಜ ಸೇವೆ ಸಲ್ಲಿಸುವಂತಾಗಬೇಕು ಎಂದರು.ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಧ. ಚವ್ಹಾಣ, ಶ್ರೀ ಹೊಳಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ಚೇರಮನ್ನರಾದ ದಾಮೋಜಿ ನಾಗಪ್ಪ ತೆಗ್ಗಳ್ಳಿ, ಗ್ರಾಪಂ ಸದಸ್ಯರಾದ ಅಶೋಕ ಬಳ್ಳಾರಿ, ಸೋಮಪ್ಪ, ಜಗದೀಶ, ಬಿ.ಡಿ. ಪಲ್ಲೇದ, ಗುರಪ್ಪ ವಡ್ಡರ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಎನ್‌ಎಸ್‌ಎಸ್ ಶಿಬಿರಾಧಿಕಾರಿ ಪ್ರೊ. ಬಸವರಾಜ ಕುರಗುಂದ ಶಿಬಿರದ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜು ನಾಯಕ ಪ್ರಾಸ್ತಾವಿಕ ಮಾತನಾಡಿದರು. ರಾಣಿ ಮತ್ತು ಸಂಗಡಿಗರು ಎನ್‌ಎಸ್‌ಎಸ್ ಗೀತೆಯನ್ನು ಹಾಡಿದರು. ಸಹ ಶಿಬಿರಾಧಿಕಾರಿಗಳಾದ ಗಿರೀಶ್ ಜಿ. ಸ್ವಾಗತಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಶಂಕರ ಬಾರಿಕೇರ ವಂದಿಸಿದರು. ಡಾ. ಅನುಷಾ ಎಚ್.ಸಿ. ಕಾರ್ಯಕ್ರಮ ನಿರೂಪಿಸಿದರು.