ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿದ್ಯಾರ್ಥಿಗಳಲ್ಲಿ ಸಹಕಾರ, ಸಹಬಾಳ್ವೆ, ಭ್ರಾತೃತ್ವ ಮನೋಭಾವನೆಗಳು ಮೂಡಲು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳು ಅಡಿಗಲ್ಲಾಗಿವೆ ಎಂದು ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಕರೆ ಅಭಿಪ್ರಾಯಪಟ್ಟರು.ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶ್ರಮದಾನ ಶಿಬಿರದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಯುವಜನರು ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸ ಮಾಡುವಂತೆ ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಅಪಘಾತ ಸಂಭವಿಸಿ ಸಾವು ನೋವುಗಳನ್ನು ನೋಡುತ್ತಿದ್ದೇವೆ. ಇದಕ್ಕೆ ಕಾರಣ ಹುಡುಕಿಕೊಂಡು ಹೋದಾಗ ಅದರಲ್ಲೂ ಯುವ ಸಮೂಹ ಅಪಘಾತದಿಂದ ಅವಘಡ ಉಂಟಾಗಿ ಇಡೀ ಸಂಸಾರಗಳು ಕಷ್ಟ ಅನುಭವಿಸುವುದನ್ನು ಕಾಣುತ್ತಿದ್ದೇವೆ ಎಂದರು.ಬೈಕ್ ಚಾಲನೆ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಕುಡಿದು ವಾಹನ ಚಲಾಯಿಸಬಾರದು. ತ್ರಿಬಲ್ ರೈಡ್, ವ್ಹೀಲಿಂಗ್ ಮಾಡುವುದನ್ನು ಬಿಡಬೇಕು. ನಿಮ್ಮನ್ನೆ ನಂಬಿ ನಿಮ್ಮ ಕುಟುಂಬಗಳು ಬದುಕಿತ್ತಿವೆ. ಪ್ರತಿಯೊಂದು ಜೀವಕ್ಕೆ ಬೆಲೆ ಇದೆ ಎಂದು ಮನವಿ ಮಾಡಿದರು.
ಅನ್ನ ನೀಡುತ್ತಿರುವ ರೈತರು, ಸಾಕಿ ಬೆಳೆಸಿದ ತಂದೆತಾಯಿಗಳು ಮತ್ತು ಬದುಕಲು ದಾರಿ ತೋರಿದ ಗುರುಹಿರಿಯರ ಬಗ್ಗೆ ಗೌರವ ಭಕ್ತಿ ಭಾವ ಹೊಂದಬೇಕು. ಶಿಕ್ಷಣ ಎಂಬ ಜ್ಞಾನದೊಂದಿಗೆ ಸಾಧನೆ ಮಾಡಿ ಸುಭದ್ರ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ದೇಶ ಪ್ರೇಮ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ಮನೋಭಾವನೆ ಮೈಗೂಡಿಸಿಕೊಂಡು ನಡೆಯುವಂತೆ ಕರೆ ನೀಡಿದರು.ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್, ಉಪನ್ಯಾಸಕ ಪದ್ಮನಾಭ್, ಮಂಜುನಾಥ್, ರೈತ ಸಂಘದ ನಾಗರಾಜು, ಪ್ರಕಾಶ್, ಆರ್‌ಟಿಒ ಮಲ್ಲಿಕಾರ್ಜುನ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಅಭಿಲಾಷ್, ಗ್ರಾಮದ ಮುಖಂಡರು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.