ಸಾರಾಂಶ
ಮುಂಡರಗಿ: ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ತಾಮ್ರಗುಂಡಿ ಗ್ರಾಮದ ಪ್ರತಿಯೊಂದು ಮನೆ ಮನೆಗೆ ಹೋಗಿ ಸರ್ವೆಮಾಡಿ ಆರೋಗ್ಯ, ಸ್ವಚ್ಛತೆ, ಶೌಚಾಲಯ ಮತ್ತು ಇನ್ನುಳಿದ ಅವಶ್ಯಕತೆಗಳ ಕುರಿತು ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸುವ ಕಾರ್ಯ ಮಾಡಬೇಕು ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಸಂಜೆ ಶ್ರೀ ಜ.ಅ.ವಿದ್ಯಾ ಸಮಿತಿಯ ಕೆ.ಆರ್.ಬೆಲ್ಲದ ಕಾಲೇಜು ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ದತ್ತು ಗ್ರಾಮ ತಾಮ್ರಗುಂಡಿಯಲ್ಲಿ ಗ್ರಾಮಸ್ಥರ ಸಹಕಾರರೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳುವುದರೊಂದಿಗೆ ಗ್ರಾಮದ ಸ್ವಚ್ಛತೆಗೆ ಆದ್ಯತೆಯನ್ನು ನೀಡಿ ಜಾಗೃತಿ ಮಾಡಬೇಕು. ಪರಿಸರ ಸಂರಕ್ಷಣೆಯಲ್ಲಿ ಗ್ರಾಮಸ್ಥರು ಹೆಚ್ಚು ಕಾಳಜಿವಹಿಸುವಂತೆ ತಿಳುವಳಿಕೆ ನೀಡಬೇಕು. ಪರಿಸರ ಸಂರಕ್ಷಣೆ ಇಂದಿನ ತುರ್ತು ಅವಶ್ಯಕತೆ ಇದೆ ಎಂದರು.
ಜ.ಅ.ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ದತ್ತು ಗ್ರಾಮದಲ್ಲಿನ ಅಭಿವೃದ್ಧಿಗಾಗಿ ಸ್ವಯಂ ಸೇವಕರು ಶ್ರಮಿಸಬೇಕು ಎಂದರು. ಮಾಜಿ ಗ್ರಾಪಂ ಅಧ್ಯಕ್ಷ ಹಾಲಿ ಸದಸ್ಯ ಅಮರೇಶ ಹಿರೇಮಠ, ಹಿರಿಯರಾದ ನಿಂಗಪ್ಪ ಹೆಗ್ಗಪ್ಪನವರ ಮಾತನಾಡಿ ಗ್ರಾಮದಲ್ಲಿ ಸ್ವಚ್ಚತೆ, ಶೌಚಾಲಯ ಬಳಕೆ ಮತ್ತು ಇನ್ನಿತರ ವಿಷಯಗಳ ಕುರಿತು ಜಾಗೃತಿ ಮೂಡಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜು ಮೇಲ್ವಿಚಾರಣಾ ಸಮಿತಿಯ ಉಪಕಾರ್ಯಾಧ್ಯಕ್ಷ ವಿ.ಎಫ್.ಗುಡದಪ್ಪನವರ ಮತ್ತು ಸದಸ್ಯರಾದ ಎಂ.ಜಿ. ಗಚ್ಚಣ್ಣವರ ಮಾತನಾಡಿದರು.ಕಾಲೇಜು ಮೇಲ್ವಿಚಾರಣಾ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ.ಆರ್.ಎಲ್. ಪೊಲೀಸ್ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, ಎನ್.ಎಸ್.ಎಸ್ ಶಿಬಿರವು ಗ್ರಾಮೀಣ ಭಾಗಗಳಲ್ಲಿ ಜನತೆಗೆ ಅರಿವನ್ನು ಮೂಡಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ ಕಲಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಹಾದೇವಕ್ಕ ಹಳ್ಳಿ, ಯಲ್ಲಪ್ಪ ಮುಡಿಯಮ್ಮನವರ, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ಬಿ.ಎಫ್. ಈಟಿ, ಪ್ರಾ ಡಿ.ಸಿ. ಮಠ, ಸಿ.ಎಸ್. ಅರಸನಾಳ, ಗುಡದಪ್ಪ ಶಿರಹಟ್ಟಿ, ದೇವೇಂದ್ರಪ್ಪ ಚಿಕ್ಕಣ್ಣವರ, ಸಾವಿತ್ರಿ ವಡ್ಡರ, ಮೈಲಾರಪ್ಪ ಕವಲೂರ, ತಿರುಪತ್ತೆಪ್ಪ ಬಂಡಿ, ಚಂದ್ರಪ್ಪ ಅಳವಂಡಿ, ಎಲ್ಲಪ್ಪ ಹೂಲಗೇರಿ, ಮಲ್ಲಪ್ಪ ಡೋಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ಆರ್.ಎಚ್. ಜಂಗಣವಾರಿ ನಿರೂಪಿಸಿದರು. ಕಾರ್ಯಕ್ರಮಧಿಕಾರಿ ಡಾ.ಸಚಿನ ಉಪ್ಪಾರ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))