ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಇದೇ 23ರಂದು ಜನವಾಡಾ ಹತ್ತಿರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ) ಆಡಳಿತ ಮಂಡಳಿಗೆ ನಡೆಯಲಿರುವ 2025- 2030ರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪೆನಾಲ್ ಹಿಂದಡಿ ಇಟ್ಟಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕಾರ್ಖಾನೆ ಚುನಾವಣೆ ಉಸ್ತುವಾರಿಗಳಾದ ಗುರುನಾಥ ಜ್ಯಾಂತಿಕರ್ ತಿಳಿಸಿದ್ದಾರೆ.ಈಗಾಗಲೇ ಕಾರ್ಖಾನೆಯ ಮತದಾರರ ಪಟ್ಟಿಯಲ್ಲಿ ಭಾರಿ ಲೋಪ ದೋಷಗಳಾಗಿವೆ ಎಂದು ಆರೋಪಿಸಿದ್ದ ಬಿಜೆಪಿಯ ಮುಖಂಡರು ಪ್ರಸಕ್ತ ಚುನಾವಣೆ ಸಂಬಂಧ ಪಕ್ಷದ ಸಭೆ ನಡೆಸಿ ಅತಿವೃಷ್ಟಿ ಸಂಕಷ್ಟ ಹಾಗೂ ರೈತರ ಮತ್ತು ಕಬ್ಬು ಬೆಳೆಗಾರರ ಹಿತದಿಂದ ಈ ಚುನಾವಣೆ ಸಂಬಂಧ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿ ಅದರಲ್ಲಿ ಕಾರ್ಖಾನೆಯ ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.
ಎನ್‌ಎಸ್‌ಎಸ್‌ಕೆ ಚುನಾವಣೆಗಾಗಿ ಪಕ್ಷದ ಬೆಂಬಲಿತ ಪೆನಾಲ್ ಮಾಡಲಾಗಿತ್ತು. ಕಾರ್ಖಾನೆ ಪಾರದರ್ಶಕವಾಗಿ ನಡೆಸಲು ಹಾಗೂ ರೈತರ ಹಿತಕ್ಕಾಗಿ ಒಳ್ಳೆಯ ವಿರೋಧ ಪಕ್ಷ ಇರಬೇಕೆಂಬ ಕಾರಣಕ್ಕೆ ನಮ್ಮ ಬೆಂಬಲಿತರ ಸ್ಪರ್ಧೆಗೆ ನಿರ್ಧರಿಸಿ ಮುಂದಾಗಿದ್ದೇವು, ಆದರೆ ಬಹಳಷ್ಟು ಅರ್ಹ ಸದಸ್ಯ ಮತದಾರರ ಹೆಸರು ಕೈಬಿಟ್ಟ ಅಂಶ ಗೊತ್ತಾಗಿ ಎಲ್ಲ ಅರ್ಹರಿಗೂ ಮತದಾನದ ಹಕ್ಕು ಸಿಗಬೇಕೆಂಬ ಉದ್ದೇಶದಿಂದ ಕಾರ್ಖಾನೆಯ ಕೆಲ ಸದಸ್ಯ ರೈತರು ಕಲಬುರಗಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಸೆ. 27ರಂದು ನಡೆಯಬೇಕಿದ್ದ ಕಾರ್ಖಾನೆ ಚುನಾವಣೆಗೆ ತಡೆಯಾಜ್ಞೆ ಬಂದು, ಚುನಾವಣೆ ಮುಂದೂಡಲಾಗಿತ್ತು. ಇದೀಗ ತಡೆಯಾಜ್ಞೆ ತೆರವಾದ ಬಳಿಕ ಅ. 23ರಂದು ಚುನಾವಣೆ ನಡೆಯುತ್ತಿದೆ. ಈ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಸಲಾಗಿದೆ ಎಂದಿದ್ದಾರೆ.ಕಾರ್ಖಾನೆ ಸದಸ್ಯ ರೈತರು ಮತದಾರರ ಪಟ್ಟಿಯ ಅಕ್ರಮ ಪ್ರಶ್ನಿಸಿ ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ವಿಷಯ ಸಂಬಂಧ ಕಾರ್ಖಾನೆ ಹಿಂದಿನ ಕೆಲವರು ಬಿಜೆಪಿಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಕಾರ್ಖಾನೆ ಬಂದ್ ಮಾಡಿಸುತ್ತಾರೆ ಎಂದು ಅನಗತ್ಯ ವದಂತಿ ಎಬ್ಬಿಸಿ ಗೊಂದಲ ಎಬ್ಬಿಸಿರುವುದು ಖಂಡನೀಯ. ರೈತರ ಹಿತದ ವಿಷಯ ಬಂದಾಗ ನಮ್ಮ ಪಕ್ಷ ಮುಂಚೂಣಿ ಯಲ್ಲಿ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ರೈತರ ಸ್ಥಿತಿ ಚೆನ್ನಾಗಿಲ್ಲ. ಅತಿವೃಷ್ಟಿಯಿಂದ ಉದ್ದು, ಹೆಸರು, ಸೋಯಾಬೀನ್ ಸೇರಿ ಬಹುತೇಕ ಬೆಳೆಗಳು ನೀರು ಪಾಲಾಗಿವೆ. ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹಿಂಗಾರು ಬಿತ್ತನೆಗೂ ರೈತರಲ್ಲಿ ಗತಿಯಲ್ಲದಂತಾಗಿದೆ. ಕಬ್ಬು ಬೆಳೆ ಮಾತ್ರ ರೈತರಿಗೆ ಈಗ ಏಕೈಕ ಆಸರೆಯಾಗಿದೆ. ಬೇಗ ಕಾರ್ಖಾನೆ ಆರಂಭವಾಗಿ ಕಬ್ಬು ನುರಿಸುವಿಕೆ ಆರಂಭವಾಗಲಿ ಎಂಬ ರೈತರ ಹಿತವನ್ನು ಗಮನದಲ್ಲಿಟ್ಟು ಕೊಂಡು ಮತ್ತು ಎದುರಾಳಿ ಪೆನಾಲ್‌ನವರು ಕಾರ್ಖಾನೆಯನ್ನು ಮುಂದೆ ಸುಸೂತ್ರ, ಪಾರದರ್ಶಕವಾಗಿ ನಡೆಸಲಿ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಪೆನಾಲ್ ತನ್ನೆಲ್ಲ ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಸರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ತಾರತಮ್ಯವಿಲ್ಲದೆ ಕಬ್ಬು ನುರಿಸಲಿ :
ಮುಂದೆ ಅಧಿಕಾರಕ್ಕೆ ಬರುವ ಅಧ್ಯಕ್ಷರು, ಆಡಳಿತ ಮಂಡಳಿಯು ಕಾರ್ಖಾನೆ ಚೆನ್ನಾಗಿ ರೈತ ಪರವಾಗಿ ನಡೆಸಬೇಕು. ಯಾವುದೇ ತಾರತಮ್ಯ ಮಾಡದೆ ಎಲ್ಲ ರೈತರ ಕಬ್ಬು ನಿಗದಿತ ಸಮಯದಲ್ಲಿ ತೆಗೆದುಕೊಂಡು ಹೋಗಬೇಕು. ನಿಗದಿತ ಸಮಯದಲ್ಲಿ ಕಬ್ಬಿನ ಬಿಲ್ ಪಾವತಿಸಬೇಕು. ಪ್ರಸಕ್ತ ವರ್ಷ ರೈತರು ಸಂಕಷ್ಟದಲ್ಲಿರುವ ಕಾರಣ ಅವರಿಗೆ ಹೆಚ್ಚಿನ ನೆರವಾಗಲು ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ. ದರ ನಿಗದಿಪಡಿಸಿ ರೈತಪರ ಬದ್ಧತೆ ಪ್ರದರ್ಶಿಸಬೇಕು ಎಂದು ಆಗ್ರಹಿಸುತ್ತೇವೆ ಎಂದಿದ್ದಾರೆ.ಬಿಜೆಪಿ ಬೆಂಬಲಿತ ಪ್ಯಾನಲ್ ಹಿಂದಡಿ
ಇಟ್ಟರೂ ಚುನಾವಣೆ ನಡೆಯಲೇಬೇಕುಬೀದರ್ನ ಹೊರವಲಯದಲ್ಲಿರುವ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಚುನಾವಣೆ ಘೋಷಣೆಯಾಗಿ ಉಮಾಕಾಂತ ನಾಗಮಾಪರಪಳ್ಳಿ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಅವರ ಪರವಾಗಿ ದಿ. ಗುರುಪಾದಪ್ಪ ನಾಗಮಾರಪಳ್ಳಿ ಪ್ಯಾನಲ್ ಹೆಸರಲ್ಲಿ 13 ನಿರ್ದೇಶಕ ಸ್ಥಾನಗಳ ಪೈಕಿ ಚುನಾವಣೆಗೆ ಧುಮುಕಿದ್ದ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಸಿ-ವರ್ಗ ಸಹಕಾರ ಸಂಘಗಳ ಮತಕ್ಷೇತ್ರದಿಂದ, ಬಿ-ವರ್ಗ ಕಬ್ಬು ಬೆಳೆಗಾರರಲ್ಲದ ಮತ ಕ್ಷೇತ್ರದಿಂದ ಅಂಬ್ರೇಶ ನಾಗಮಾರಪಳ್ಳಿ, ಎ-ವರ್ಗದ ಕಬ್ಬು ಬೆಳೆಗಾರರ ಮತಕ್ಷೇತ್ರದಿಂದ ಮಹಿಳೆಯರಿಗಾಗಿ ಮೀಸಲಿರಿಸಿದ್ದ ವರ್ಗದಿಂದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೀಗೆಯೇ ಒಟ್ಟು 13 ನಿರ್ದೇಶಕರ ಸ್ಥಾನಗಳ ಪೈಕಿ ಸಾಮಾನ್ಯ ಕ್ಷೇತ್ರದಿಂದ 5 ನಿರ್ದೇಶಕರ ಆಯ್ಕೆಯಾಗಬೇಕಿದ್ದು ಇದಕ್ಕಾಗಿ 11 ಜನ ಚುನಾವಣಾ ಕಣದಲ್ಲಿದ್ದಾರೆ. ಇನ್ನು ಬಿಸಿಎ ಇಬ್ಬರ ಪೈಕಿ ಒಬ್ಬರು, ಬಿಸಿಬಿ ಇಬ್ಬರಲ್ಲಿ ಒಬ್ಬರು, ಎಸ್‌ಸಿ ಇಬ್ಬರಲ್ಲಿ ಒಬ್ಬರು, ಎಸ್‌ಟಿಯ ಮೂವರಲ್ಲಿ ಒಬ್ಬರು ಆಯ್ಕೆಯಾಗಲಿದ್ದು, ಇನ್ನು ಈಗಾಗಲೇ 4 ಜನ ಅವಿರೋಧ ಆಯ್ಕೆಯಾಗಿದ್ದಿದೆ. ಚುನಾವಣೆಯಿಂದ ಬಿಜೆಪಿಯು ತನ್ನ ಬೆಂಬಲಿತ ಅಭ್ಯರ್ಥಿಗಳು ಹಿಂದಕ್ಕೆ ಸರಿದಿದ್ದಾರೆ ಎಂದರೂ ಚುನಾವಣೆ ನಡೆಯಲೇಬೇಕು.ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಚುನಾವಣೆಗೆ ಒಟ್ಟು 4438 ಮತದಾರರು ಮತ ಚಲಾವಣೆಯ ಹಕ್ಕು ಹೊಂದಿದ್ದು, ಔರಾದ್ ತಾಲೂಕಿನಲ್ಲಿ- 947 ಮತದಾರರು, ಬಸವಕಲ್ಯಾಣ - 262, ಭಾಲ್ಕಿ - 485, ಬೀದರ್- 2015 ಹಾಗೂ ಹುಮನಾಬಾದ್ 729 ಮತದಾರರನ್ನು ಹೊಂದಿದೆ. ಅ. 23ರಂದು ಬೆಳಿಗ್ಗೆ 9ರಿಂದ ಮತದಾನ ಪ್ರಕ್ರಿಯೆ ನಡೆಯುತ್ತದೆ.