ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕಾಲೇಜುಗಳಲ್ಲಿ ವ್ಯಾಪಕವಾಗಿರುವ ಡ್ರಗ್ಸ್, ರ್‍ಯಾಗಿಂಗ್ ಪಿಡುಗು ನಿರ್ಮೂಲನೆ ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಸಮಸ್ಯೆ ನಿವಾರಣೆಗಾಗಿ ಹೆಲ್ಪ್‌ಲೈನ್ (ಸಂಖ್ಯೆ- 7400840069) ಆರಂಭಿಸಲಾಗಿದೆ. ಕರೆ ಅಥವಾ ವಾಟ್ಸಪ್ ಮೂಲಕ ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳಬಹುದು ಎಂದು ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಎನ್‌ಎಸ್‌ಯುಐ ವತಿಯಿಂದ ರಾಜ್ಯಾದ್ಯಂತ ವಿದ್ಯಾರ್ಥಿ ನ್ಯಾಯ ಯಾತ್ರೆ ಸಂಚರಿಸುತ್ತಿದ್ದು, 8 ಜಿಲ್ಲೆಗಳನ್ನು ಪೂರೈಸಿ 9ನೇ ಜಿಲ್ಲೆಯಾಗಿ ದಕ್ಷಿಣ ಕನ್ನಡಕ್ಕೆ ಆಗಮಿಸಿದೆ. ಈ ಸಂದರ್ಭ ವಿದ್ಯಾರ್ಥಿಗಳು ಈ ಸಂಖ್ಯೆಯ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅವುಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡಿದ್ದಾರೆ ಎಂದು ಹೇಳಿದರು.
ಮೇಕ್-ಅಪ್ ಪರೀಕ್ಷೆಗೆ ಆಗ್ರಹ:ಪ್ರಸ್ತುತ ಪದವಿ ವಿದ್ಯಾರ್ಥಿಗಳು ಯಾವುದಾದರೂ ಪರೀಕ್ಷೆಯಲ್ಲಿ ಫೇಲಾದರೆ ಮರು ಪರೀಕ್ಷೆ ಬರೆಯಲು ಒಂದು ವರ್ಷ ಕಾಯಬೇಕು. ಇದರಿಂದ ರಾಜ್ಯದ ಕಾಲೇಜುಗಳಲ್ಲಿ ಡ್ರಾಪ್‌ಔಟ್ ಆಗುವವರ ಸಂಖ್ಯೆ ಹೆಚ್ಚಿದೆ. ಅಲ್ಲದೆ, ಕೊನೆ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಪದ್ಧತಿಯನ್ನು ಕೈಬಿಟ್ಟು ತಕ್ಷಣ ಮರು ಪರೀಕ್ಷೆ ನಡೆಸುವ ವ್ಯವಸ್ಥೆ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸೂಕ್ತ ಕ್ರಮದ ನಿರೀಕ್ಷೆಯಿದೆ ಎಂದು ಅನ್ವಿತ್ ಕಟೀಲ್ ಹೇಳಿದರು.
ದ.ಕ. ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್ ಆಳ್ವ, ಮುಖಂಡರಾದ ಸುಖಾಲಿಂದರ್ ಸಿಂಗ್, ಸಫ್ವಾನ್ ಕುದ್ರೋಳಿ, ಸುಹಾನ್ ಜೋಶ್ವ, ಸಾಹಿಲ್ ಮಂಚಿಲ, ಫಾರೂಕ್ ಮತ್ತಿತರರಿದ್ದರು.