ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನುಗ್ಗೇಹಳ್ಳಿ ವಸತಿ ಶಾಲೆ ಆರಂಭ

| Published : Apr 09 2025, 12:35 AM IST

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನುಗ್ಗೇಹಳ್ಳಿ ವಸತಿ ಶಾಲೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಸಂತೆ ಸಮೀಪದಲ್ಲಿ ಸುಮಾರು 13 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗಿರುವ ಮೊರಾರ್ಜಿ ವಸತಿ ಶಾಲೆ ವೀಕ್ಷಿಸಿ ರೈತರು ಹಾಗೂ ಗುತ್ತಿಗೆದಾರ ಸಂಧಾನ ಸಭೆ ನಡೆಸಿ ಮಾತನಾಡಿದರು, ಕಂದಾಯ ಇಲಾಖೆಯಿಂದ 8.17 ಎಕರೆ ಸರ್ಕಾರಿ ಭೂಮಿ ಸರ್ವೇ ಮಾಡಿ ಗುತ್ತಿಗೆದಾರರಿಗೆ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡಲಾಗಿದೆ. ಸರ್ಕಾರ ನಿಗದಿತ ಅವಧಿಯಲ್ಲಿ ಕಾಮಗಾರಿ ಮಾಡಿಸಲಾಗಿದೆ ಎಂದು ಡೀಸಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಕಳೆದ 3 ವರ್ಷಗಳ ಹಿಂದೆಯೇ ನುಗ್ಗೇಹಳ್ಳಿ ಮೊರಾರ್ಜಿ ವಸಿತಿ ಶಾಲೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು, ರೈತರು ಹಾಗೂ ಗುತ್ತಿಗೆದಾರರ ವ್ಯಾಜ್ಯದಿಂದ ತಡೆಗೋಡೆ ಅಪೂರ್ಣವಾಗಿತ್ತು. ಈಗ ಸಮಸ್ಯೆಯನ್ನು ಬಗೆಹರಿಸಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಸತಿ ಶಾಲೆ ಆರಂಭಿಸುವುದಾಗಿ ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ ನೀಡಿದರು.

ಹೋಬಳಿ ಸೋಮವಾರ ಸಂತೆ ಸಮೀಪದಲ್ಲಿ ಸುಮಾರು 13 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗಿರುವ ಮೊರಾರ್ಜಿ ವಸತಿ ಶಾಲೆ ವೀಕ್ಷಿಸಿ ರೈತರು ಹಾಗೂ ಗುತ್ತಿಗೆದಾರ ಸಂಧಾನ ಸಭೆ ನಡೆಸಿ ಮಾತನಾಡಿದರು, ಕಂದಾಯ ಇಲಾಖೆಯಿಂದ 8.17 ಎಕರೆ ಸರ್ಕಾರಿ ಭೂಮಿ ಸರ್ವೇ ಮಾಡಿ ಗುತ್ತಿಗೆದಾರರಿಗೆ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡಲಾಗಿದೆ. ಸರ್ಕಾರ ನಿಗದಿತ ಅವಧಿಯಲ್ಲಿ ಕಾಮಗಾರಿ ಮಾಡಿಸಲಾಗಿದೆ. ಆದರೆ ಕೃಷಿ ಭೂಮಿಗೆ ತೆರಳಲು ರಸ್ತೆ ನೀಡುವಂತೆ ಕೆಲ ರೈತರು ಗೊಂದಲ ಸೃಷ್ಟಿಸಿದ್ದರು, ಇದರೊಂದಿಗೆ ಓರ್ವ ರೈತ ತನ್ನ ಒಂದು ಎಕರೆ ಕೃಷಿ ಭೂಮಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ತಾಲೂಕು ಆಡಳಿತಕ್ಕೆ ಅರ್ಜಿ ನೀಡಿದ್ದರು. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಎಂದರು.

ರೈತರಿಗೆ ಕೃಷಿ ಭೂಮಿ ಮಂಜೂರಿ ಚೀಟಿ ನೀಡಲಾಗಿದೆ ಆದರೆ ಇದೇ ಜಾಗದಲ್ಲಿ ಇದೆ ಎನ್ನುವುದಕ್ಕೆ ನಕ್ಷೆ ಇಲ್ಲ, ರೈತ ಕೂಡ ಹದ್ದುಬಸ್ತು ಮಾಡಿಸಿಕೊಂಡಿಲ್ಲ, ಸ್ಯಾಟ್‌ಲೈಟ್ ಸರ್ವೇ ಹಾಗೂ ಭೂಮಾಪನ ಇಲಾಖೆಯಡಿ ಸರ್ವೇ ಮಾಡಿದಾಗ ರೈತರ ಯಾವುದೇ ಭೂಮಿ ಒತ್ತುವರಿಯಾಗಿರುವುದು ಕಂಡು ಬಂದಿಲ್ಲ, ಹಾಗಾಗಿ ಗುತ್ತಿಗೆದಾರರು ಕಾಮಗಾರಿ ಮಾಡಬಹದು ಇದನ್ನು ಯಾರು ಅಡ್ಡಿ ಪಡಿಸುವಂತಿಲ್ಲ ಎಂದು ಆದೇಶಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ಮಾತನಾಡಿ, ನುಗ್ಗೇಹಳ್ಳಿ ಮೊರಾರ್ಜಿ ವಸತಿ ಶಾಲೆ ಹಲವು ವರ್ಷದಿಂದ ಗೂರಮಾರನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ, ಕೋಣಕುಂಟೆ ಸಮೀಪದ ನುಗ್ಗೇಹಳ್ಳಿ ಮೊರಾರ್ಜಿ ವಸತಿ ಶಾಲೆ ಕಟ್ಟಡ ಪೂರ್ಣವಾಗಿದೆ. ಆದರೂ ಸಣ್ಣಪುಟ್ಟ ಲೋಪದಿಂದ ಕಟ್ಟಡವನ್ನು ಮೂರು ವರ್ಷದಿಂದ ಪಾಳು ಬಿಟ್ಟಿರುವುದು ತರವಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.

ಈ ಹಿಂದೆಯೂ ಗುತ್ತಿಗೆದಾರನಿಂದ ಕಟ್ಟಡವನ್ನು ಕ್ರೈಸ್ ತಮ್ಮ ಇಲಾಖೆಗೆ ಪಡೆಯುವುದಾಗಿ ಹೇಳಿ ಕಾಮಗಾರಿ ಪೂರ್ಣ ಮಾಡಿಸಿಕೊಳ್ಳುವಲ್ಲಿ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಕಟ್ಟಡ ಪಾಳು ಬಿತ್ತು. ಈ ವೇಳೆ ಕಟ್ಟಡದಲ್ಲಿನ ಫ್ಯಾನ್, ವೈಯರ್‌, ಸೋಲಾರ್ ಸೇರಿದಂತೆ ಇತರ ಬೆಲೆ ಬಾಳುವ ವಸ್ತುಗಳು ಕಳ್ಳರ ಪಾಲಾಯಿತು. ಇದರಿಂದ ಗುತ್ತಿಗೆದಾರನಿಗೆ ನಷ್ಟವಾಗಿದೆ ಇದನ್ನು ಯಾರು ತುಂಬುತ್ತಾರೆ ಇದು ಮರುಕಳಿಸಬಾರದು ಎಂದರು.

ರೈತರ ಕೃಷಿ ಭೂಮಿ ಒತ್ತುವರಿಯಾಗಿದ್ದರೆ ಅದಕ್ಕೆ ಬೇರೆ ಜಾಗದಲ್ಲಿ ಸರ್ಕಾರ ಭೂಮಿ ಗುರುತಿಸಿ ರೈತರಿಗೆ ನೀಡಲಿ ಇಲ್ಲವೆ, ಪರಿಹಾರ ನೀಡಲಿ ಇದನ್ನೇ ಹೇಳಿಕೊಂಡು ಇನ್ನು ಎಷ್ಟು ದಿವಸ ಪೂರ್ಣ ಆಗಿರುವ ಕಟ್ಟಡವನ್ನು ಪಾಳು ಬೀಳುವಂತೆ ಮಾಡುತ್ತೀರ. ಇದರಿಂದ ಕಟ್ಟಡ ಗುಣಮಟ್ಟ ಕಡಿಮೆಯಾಗುತ್ತದೆ. ಇಲ್ಲಿ ವಸತಿ ಶಾಲೆ ನಡೆದರೆ ಕಟ್ಟಡಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

ಕಾಂತರಾಜು ಮಾತನಾಡಿ, ಈಗಾಗಲೇ ಮಕ್ಕಳ ಅನುಕೂಲಕ್ಕಾಗಿ ಕಟ್ಟಡವನ್ನು ಬಳಕೆ ಮಾಡಿಕೊಳ್ಳಬೇಕಾಗಿತ್ತು. ಜಾಗದ ವಿಚಾರವಾಗಿ ಸ್ಥಳೀಯರ ತಗಾದೆ ಇದ್ದ ಕಾರಣ, ಕಟ್ಟಡದ ಕಾಮಗಾರಿ ಸಂಪೂರ್ಣ ಮುಗಿದಿದ್ದರೂ, ಕಾಂಪೌಂಡ್ ಪೂರ್ಣವಾಗಿರಲಿಲ್ಲ, ಇದೀಗ ಇರುವ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಆಗಮಿಸಿ ರೈತರನ್ನು ಮನವೊಲಿಸಿ ಪರಿಹರಿಸಲಾಗಿದೆ. ಕಾಂಪೌಂಡ್ ಸೇರಿ ಇರುವ ಸಣ್ಣಪುಟ್ಟ ಕಾಮಗಾರಿಯನ್ನು 15 ದಿನಗಳಲ್ಲಿ ಮುಗಿಸಿ ಕ್ರೈಸ್‌ಗೆ ಹಸ್ತಾಂತರಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮಕ್ಕಳನ್ನು ಇಲ್ಲಿಗೆ ಸ್ಥಳಾಂತರಿಸಿ ವಸತಿಶಾಲೆ ಆರಂಭಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕ್ರೈಸ್ ಎಸ್ಇ ಜನಾರ್ಧನ್, ಇಇ ಪಂಪಾಪತಿ, ಎಇಇ ನಟರಾಜ್ ಎಇ ಮಹೇಶ್, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಕುಮಾರ್, ತಾಲೂಕು ಮಟ್ಟದ ಅಧಿಕಾರಿ ರಾಜೇಶ್ ಚೌವಣ್, ತಹಸೀಲ್ದಾರ್‌ ನವೀನ್ ಕುಮಾರ್‌, ಎಡಿಎಲ್ಆರ್‌ ಲಲ್ಲೂ ಪ್ರಸಾದ್, ಆರ್‌ ಐ ಲತೀಶ್, ರೈತಸಂಘದ ಮಹಿಳಾ ನಾಯಕಿ ನಾಗರತ್ನ, ಯುವ ಕಾಂಗ್ರೆಸ್ ಮುಖಂಡ ರುದ್ರೇಶ್, ಗುತ್ತಿಗೆದಾರ ಪ್ರಸನ್ನ ಕುಮಾರ್ ಸೇರಿದಂತೆ ರೈತ ಸಂಘದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.