ರಾಜ್ಯದಲ್ಲಿ 2015-16 ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ, ಪ್ರಾಥಮಿಕ ಶಾಲೆಯಲ್ಲಿದ್ದ ಮಕ್ಕಳ ಸಂಖ್ಯೆ 2025-26 ನೇ ಸಾಲಿನ ವೇಳೆಗೆ ಶೇ.19ರಷ್ಟು ಕುಸಿತ ಕಂಡಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಬಿಸಿಯೂಟ, ಶೂ, ಪಠ್ಯಪುಸ್ತಕ, ಸಮವಸ್ತ್ರ, ಮೊಟ್ಟೆ, ಹಾಲು, ಬಾಳೆಹಣ್ಣು ಸೇರಿದಂತೆ ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಹತ್ತಾರು ಉಚಿತ ಸೌಲಭ್ಯ ನೀಡಿದರೂ ಸಹ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಹೌದು, ರಾಜ್ಯದಲ್ಲಿ 2015-16 ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ, ಪ್ರಾಥಮಿಕ ಶಾಲೆಯಲ್ಲಿದ್ದ ಮಕ್ಕಳ ಸಂಖ್ಯೆ 2025-26 ನೇ ಸಾಲಿನ ವೇಳೆಗೆ ಶೇ.19ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಖಾಸಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2015-16 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಶಾಲೆಯಲ್ಲಿ 47.1ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದರು, ಆದರೆ, 2025-26 ನೇ ಸಾಲಿನ ವೇಳೆಗೆ ವಿದ್ಯಾರ್ಥಿಗಳ ಸಂಖ್ಯೆ 39.2 ಲಕ್ಷಕ್ಕೆ ಕುಸಿದಿದೆ. ಅಂದರೆ ಹತ್ತು ವರ್ಷಗಳಲ್ಲಿ 8 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗಿದೆ.

ಇದು, ಸರ್ಕಾರಿ ಶಾಲೆಯಲ್ಲಿ ಉಚಿತ ಸೌಲಭ್ಯ ಇದ್ದರೂ ಸಹ ವಿದ್ಯಾರ್ಥಿಗಳು ಮತ್ತು ಪಾಲಕರು ಸರ್ಕಾರಿ ಶಾಲೆಯಿಂದ ದೂರವಾಗುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಇದೇ ವೇಳೆ 2015-16 ರಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 36.3 ಲಕ್ಷ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ ಬರೋಬ್ಬರಿ ₹ 47 ಲಕ್ಷಕ್ಕೆ ಏರಿಕೆಯಾಗಿದ್ದು, ಶೇ.29 ರಷ್ಟು ಏರಿಕೆಯಾಗಿದೆ ಎನ್ನುವುದು ಗಮನಾರ್ಹ.

ಈ ಶಾಲೆಗಳು ಪಕ್ಕಾ ಖಾಸಗಿ ಅನುದಾನ ರಹಿತ ಶಾಲೆಗಳಾಗಿದ್ದು, ಇಲ್ಲಿ ಸರ್ಕಾರದಿಂದ ಕೊಡಮಾಡುವ ಯಾವುದೇ ಉಚಿತ ಸೌಲಭ್ಯ ಇರುವುದಿಲ್ಲ. ಆದರೂ ವಿದ್ಯಾರ್ಥಿಗಳು ಖಾಸಗಿ ಶಾಲೆಯತ್ತ ಒಲವು ಹೆಚ್ಚುತ್ತಿವೆ.

ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳು ಅಧಿಕ:

ಶಾಲೆಯಿಂದ ಹೊರಗುಳಿಯ ವಿದ್ಯಾರ್ಥಿಗಳ ಸಂಖ್ಯೆಯೂ ಸರ್ಕಾರಿ ಶಾಲೆಯಲ್ಲಿಯೇ ಅಧಿಕವಾಗಿದೆ. ಪ್ರಸಕ್ತ ವರ್ಷದ ದಾಖಲಾತಿ ಅನುಪಾತದಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 98.65, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 99.89 ಹಾಗೂ ಪ್ರೌಢ ಶಾಲೆ ವಿಭಾಗದಲ್ಲಿ ಶೇ. 95.08 ಇರುತ್ತದೆ. ಲೆಕ್ಕ ಹಾಕಿದಾಗ ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ಸಂಖ್ಯೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2.50, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರೌಢ ಶಾಲೆಯ ವಿಭಾಗದಲ್ಲಿ ಶೇ. 22.88 ಪ್ರಮಾಣ ಇರುತ್ತದೆ. ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆಯ ಹಂತದವರೆಗೂ ಮುಂದುವರೆಯುವ ಪ್ರಮಾಣ ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ಕುಸಿತವಾಗಿದೆ. 50 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳ ಸಂಖ್ಯೆ 2025-26 ನೇ ಸಾಲಿಗೆ 25683 ಕ್ಕೆ ಕುಸಿದಿದೆ.

ಸರ್ಕಾರಕ್ಕೆ ಹೊರ: 50 ಮತ್ತು ಅದಕ್ಕಿಂತ ಕಡಿಮೆ ಇರುವ ಈ ಶಾಲೆಗಳನ್ನು ನಿಭಾಯಿಸುವುದೇ ಸರ್ಕಾರಕ್ಕೆ ದೊಡ್ಡ ಹೊರೆಯಾಗಿದೆ. ಕೇವಲ 50 ವಿದ್ಯಾರ್ಥಿಗಳು ಇರುವ ಶಾಲೆಗೆ ಇಬ್ಬರು ಶಿಕ್ಷಕರನ್ನು ಸಹ ನೀಡುವುದಕ್ಕೆ ಅವಕಾಶ ಇಲ್ಲ. ಅಲ್ಲಿಯ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಮತ್ತಷ್ಟು ಕುಸಿಯಲು ಇದು ಕಾರಣವಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ತಲೆ ಎತ್ತುತ್ತಿರುವ ಖಾಸಗಿ ಶಾಲೆಗಳತ್ತಲೇ ವಿದ್ಯಾರ್ಥಿಗಳು ದೌಡಾಯಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಏನು ಸಮಸ್ಯೆ:ಸರ್ಕಾರಿ ಶಾಲೆಗಳಲ್ಲಿ ಏನೆಲ್ಲ ಸೌಲಭ್ಯಗಳು ಇವೆ ಮತ್ತು ನುರಿತ ಅನುಭವಿ ಶಿಕ್ಷಕರು ಇದ್ದಾರೆ. ಅರ್ಹ ಶಿಕ್ಷಕರೇ ಸರ್ಕಾರಿ ಶಾಲೆಗಳಲ್ಲಿ ಇರುತ್ತಾರೆ. ಆದರೆ, ಖಾಸಗಿ ಶಾಲೆಯಲ್ಲಿ ಡಿಇಡಿ ಮತ್ತು ಬಿಇಡಿ ತರಬೇತಿ ಪಡೆಯದವರೇ ಬಹುತೇಕ ಬೋಧನೆ ಮಾಡುತ್ತಾರೆ. ಪ್ರಾಥಮಿಕ ಹಂತದಲ್ಲಿಯಂತೂ ಪಿಯುಸಿ, ಪದವಿ ಪಾಸಾದವರೇ ಯಾವುದೇ ತರಬೇತಿ ಇಲ್ಲದೆ ಪಾಠ ಮಾಡುತ್ತಿರುತ್ತಾರೆ. ಮಕ್ಕಳ ಮನೋ ಬೆಳವಣಿಗೆ ಆಧರಿಸಿ ಶಿಕ್ಷಣ ಕೊಡಬೇಕಾಗಿದ್ದರೂ ಖಾಸಗಿ ಶಾಲೆಗಳಲ್ಲಿ ಕಡಿಮೆ ವೇತನಕ್ಕಾಗಿ ಡಿಇಡಿ, ಬಿಇಡಿ ಪದವಿ ಪೂರೈಸದವರನ್ನು ಪಾಠಕ್ಕೆ ಕಳುಹಿಸುತ್ತಾರೆ. ಇಷ್ಟಾದರೂ ಖಾಸಗಿ ಶಾಲೆಯಲ್ಲಿಯೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಕಳವಳ ಸಂಗತಿಯಾಗಿದೆ. ಶುಲ್ಕ, ಡೊನೇಷನ್ ಪಾವತಿ ಮಾಡಿ ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಉಚಿತ ಸೌಲಭ್ಯ ಇದ್ದರೂ ಸರ್ಕಾರಿ ಶಾಲೆಯಿಂದ ದೂರ ಉಳಿಯುತ್ತಿರುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.