ಸ್ಥಳೀಯ ಪ್ರಜಾಪ್ರಭುತ್ವ ಹಾದಿ ತಪ್ಪಿದಾಗ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಒಟ್ಟಾರೆ ಎಲ್ಲಾ ಪ್ರಕರಣಗಳಿಗೂ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆಯಾಗಿದೆ. ಗ್ರೇಟರ್‌ ಮೈಸೂರು ಮಾಡುತ್ತೇವೆ ಎಂದು ಹೊರಟಿರುವ ಕಾಂಗ್ರೆಸ್‌ ಸರ್ಕಾರ, ಅದನ್ನು ಮಾಡದಿದ್ದರೂ ಪರವಾಗಿಲ್ಲ, ಪಾಲಿಕೆಯಲ್ಲಿ ಗ್ರೇಟರ್‌ ಸುಧಾರಣೆಗಳನ್ನು ಮಾಡಿದರೆ ಸಾಕಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಮಹಾನಗರ ಪಾಲಿಕೆಯು ಈಗ ಅವ್ಯವಸ್ಥೆಗಳ ಆಗರವಾಗಿದೆ. ಉತ್ತರದಾಯಿತ್ವ ಇಲ್ಲದೇ ಅಕ್ರಮಗಳ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾಲಿಕೆಯಲ್ಲಿ ಸಾರ್ವಜನಿಕ ನಿಧಿಯನ್ನೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಮೂವರು ಮಹಿಳಾ ಸಿಬ್ಬಂದಿಯನ್ನು ಅಮಾನತು ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ಚುನಾಯಿತ ಕಾರ್ಪೊರೇಟರ್‌ ಗಳು ಇಲ್ಲದಿರುವುದು, ಸಮರ್ಥ ಮೇಲ್ವಿಚಾರಣೆ ಮಾಡದಿರುವುದು, ಸುಧಾರಣೆ ಕ್ರಮಗಳನ್ನು ಕೈಗೊಳ್ಳದಿರುವುದು, ಉತ್ತರದಾಯಿತ್ವ ಇರದಿರುವುದು ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೇ ವಿಳಂಬ ಧೋರಣೆ ತೋರುತ್ತಿರುವುದು ಎಲ್ಲದ್ದಕ್ಕೂ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.

ಸ್ಥಳೀಯ ಪ್ರಜಾಪ್ರಭುತ್ವ ಹಾದಿ ತಪ್ಪಿದಾಗ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಒಟ್ಟಾರೆ ಎಲ್ಲಾ ಪ್ರಕರಣಗಳಿಗೂ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆಯಾಗಿದೆ. ಗ್ರೇಟರ್‌ ಮೈಸೂರು ಮಾಡುತ್ತೇವೆ ಎಂದು ಹೊರಟಿರುವ ಕಾಂಗ್ರೆಸ್‌ ಸರ್ಕಾರ, ಅದನ್ನು ಮಾಡದಿದ್ದರೂ ಪರವಾಗಿಲ್ಲ, ಪಾಲಿಕೆಯಲ್ಲಿ ಗ್ರೇಟರ್‌ ಸುಧಾರಣೆಗಳನ್ನು ಮಾಡಿದರೆ ಸಾಕಾಗಿದೆ ಎಂದು ಅವರು ಕುಟುಕಿದ್ದಾರೆ.

ಪಾಲಿಕೆ ಹಣ ವಂಚನೆ: ಮೂವರು ಅಮಾನತು

ಕನ್ನಡಪ್ರಭ ವಾರ್ತೆ ಮೈಸೂರು

ಕರ್ತವ್ಯಕ್ಕೆ ಗೈರಾದ ಪೌರಕಾರ್ಮಿಕರಿಗೆ ಸಂಬಳ ವಿತರಿಸಿ ಮೈಸೂರು ಮಹಾನಗರ ಪಾಲಿಕೆ ವಂಚನೆ ಮಾಡಿದ ಆರೋಪದ ಮೇರೆಗೆ ಮೂವರು ಸಿಬ್ಬಂದಿಯನ್ನು ಪಾಲಿಕೆ ಆಯುಕ್ತರು ಅಮಾನತುಗೊಳಿಸಿದ್ದಾರೆ.

ಗೈರು ಹಾಜರಾಗಿರುವ ದಿನಗಳಿಗೆ ಪೌರಕಾರ್ಮಿಕರ ಹೆಚ್ಚುವರಿ ವೇತನ ಪಾವತಿಸಿ ಕರ್ತವ್ಯ ಲೋಪ ಎಸಗಿರುವ ಪಾಲಿಕೆಯ ಆರೋಗ್ಯ ಶಾಖೆ ಪ್ರಥಮ ದರ್ಜೆ ಸಹಾಯಕರಾದ ಕೆ.ಎಲ್.ಸಿ.ಪಾಪಾ, ಪುಷ್ಪಾವತಿ ಮತ್ತು ದ್ವಿತೀಯ ದರ್ಜೆ ಸಹಾಯಕಿ ಸಿ.ಎಚ್.ಅನಿತಾ ಅಮಾನತುಗೊಂಡವರು.

2025ರ ಸೆಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಸಂಬಂಧಿಸಿದಂತೆ ಆರೋಗ್ಯ ನಿರೀಕ್ಷಕರು ನೀಡಿರುವ ಹಾಜರಾತಿ ಪಟ್ಟಿಯೊಂದಿಗೆ ಪರಿಶೀಲಿಸಿ ಎಂ.ಪುಷ್ಪಾವತಿ ಅವರು ಒಟ್ಟು 1,17,081 ರು, ಸಿ.ಎಚ್. ಅನಿತಾ ಅವರು ಒಟ್ಟು 1,54,705 ರು., ಕೆ.ಎಲ್.ಸಿ. ಪಾಪಾ ಅವರು 13,58,525 ರು.ಗಳನ್ನು ಗೈರು ಹಾಜರಿ ದಿನಗಳಿಗೂ ವೇತನ ಪಾವತಿಸಿರುದು ಕಂಡು ಬಂದಿದೆ. ಇದು ಕರ್ತವ್ಯಲೋಪ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಇಲಾಖೆ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.