ಸಾರಾಂಶ
ಹುಬ್ಬಳ್ಳಿ: ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಮೇಲೆ ಮಹಿಳಾ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇದು ಶಕ್ತಿ ಯೋಜನೆಯ ಲಾಭ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಶಕ್ತಿ ಯೋಜನೆಯಡಿ ಈವರೆಗೆ 500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದರ ಹಿನ್ನೆಲೆಯಲ್ಲಿ ಇಲ್ಲಿನ ಹೊಸೂರು ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಿ ಹಾಗೂ ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪ್ರತಿದಿನ ಸುಮಾರು 1.20 ಕೋಟಿ ಜನ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಮೊದಲು 80 ಸಾವಿರ ಪಾಸ್ ಗಳಿದ್ದವು. ಪ್ರಸ್ತುತ 1.17 ಲಕ್ಷ ಪಾಸಗಳಿವೆ. ಶೇ. 45ರಷ್ಟು ಮಹಿಳಾ ಪ್ರಯಾಣಿಕರು ಹೆಚ್ಚಳವಾಗಿದ್ದಾರೆ. ಅಲ್ಲದೇ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆ ಮೂಲಕ ಉದ್ಯೋಗಗಳ ಸೃಷ್ಟಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ ಎಂದರು.
ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಈಗಾಗಲೇ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಸುಮಾರು ₹12 ಸಾವಿರ ಕೋಟಿ ಹಣ ಖರ್ಚಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಅತ್ಯಂತ ಯಶಸ್ವಿಯಾಗಿದೆ ಎಂದರು.ಶಕ್ತಿ ಯೋಜನೆ ಯಶಸ್ವಿಯಾಗಲು ಸರ್ಕಾರದ ಜತೆಗೆ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಕಾರ್ಯ ಪ್ರಮುಖವಾಗಿದೆ. ಅದರಲ್ಲೂ ಚಾಲಕರು, ನಿರ್ವಾಹಕರು ತಾಂತ್ರಿಕ ಸಿಬ್ಬಂದಿ ವರ್ಗ, ಅಧಿಕಾರಿಗಳು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದರು.
ಮಹಾರಾಷ್ಟ್ರ, ತಮಿಳುನಾಡು ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ಬಸ್‌ಗಳಿವೆ. 25 ಸಾವಿರಕ್ಕೂ ಹೆಚ್ಚು ಬಸ್ ಗಳು ರಾಜ್ಯದಲ್ಲಿವೆ. ಸಾರಿಗೆ ಇಲಾಖೆಯಲ್ಲಿ 10 ಸಾವಿರಕ್ಕೂ ಅಧಿಕ ಉದ್ಯೋಗಗಳನ್ನು ಭರ್ತಿ ಮಾಡಲಾಗಿದೆ. 5 ಸಾವಿರ ಹೊಸ ಬಸ್ ಖರೀದಿಸಲಾಗಿದೆ. 2 ವರ್ಷದಲ್ಲಿ ಸುಮಾರು 150ಕ್ಕೂ ಹೆಚ್ಚು ಪ್ರಶಸ್ತಿ ಪಡೆದುಕೊಂಡಿದ್ದೇವೆ. 2019ರ ಡಿಸೇಲ್ ದರಕ್ಕೂ ಇಂದಿನ ಡಿಸೇಲ್ ದರಕ್ಕೂ ₹30ರಿಂದ 40ರಷ್ಟು ಹೆಚ್ಚಳವಾಗಿದೆ. ಸಂಬಳದಲ್ಲಿ ಶೇ.15ರಷ್ಟು ಹೆಚ್ಚಿಸಲಾಗಿದೆ ಎಂದರು.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ. ಮಾತನಾಡಿ, 2023ರಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಯಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸುಮಾರು 114 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಪ್ರತಿದಿನ ಸರಿಸುಮಾರು 16 ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಿದ್ದು, ಸುಮಾರು 4 ಕೋಟಿ ಶೂನ್ಯ ದರದ ಟಿಕೆಟ್ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ 5300 ಬಸ್‌ಗಳಿದ್ದು, ಪ್ರತಿದಿನ 38 ಸಾವಿರ ಟ್ರಿಪ್ ಓಡಿಸಲಾಗುತ್ತಿದೆ. ಶಕ್ತಿ ಯೋಜನೆಗಿಂತ ಮುಂಚೆ 34 ಸಾವಿರ ಟ್ರಿಪ್ ಓಡಿಸಲಾಗುತ್ತಿತ್ತು. 2 ವರ್ಷದಲ್ಲಿ 856 ಹೊಸ ಬಸ್ ಬಂದಿವೆ ಎಂದರು.
ಇದೇ ವೇಳೆ ಮಹಿಳಾ ಪ್ರಯಾಣಿಕರಿಗೆ ಸಿಹಿ ತಿನ್ನಿಸಿ, ಟಿಕೆಟ್ ವಿತರಿಸಿದರು. ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ, ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು.ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಎಂ.ಎಸ್. ಅಕ್ಕಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಡಿಸಿಪಿ ಮಹಾನಿಂಗ ನಂದಗಾವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧ್ಯಕ್ಷ ಶ್ಯಾನಪ್ಪಗೌಡ .ಆರ್. ಪಾಟೀಲ ಸೇರಿದಂತೆ ಹಲವರಿದ್ದರು.