ಅಪಘಾತದಲ್ಲಿ ಇಪ್ಪಾಡಿ ಆಸ್ಪತ್ರೆಯ ನರ್ಸ್ ಲಕ್ಷ್ಮೀಬಾಯಿ ದುರ್ಮರಣ

| Published : Mar 24 2024, 01:33 AM IST

ಅಪಘಾತದಲ್ಲಿ ಇಪ್ಪಾಡಿ ಆಸ್ಪತ್ರೆಯ ನರ್ಸ್ ಲಕ್ಷ್ಮೀಬಾಯಿ ದುರ್ಮರಣ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ನರ್ಸ್​ವೊಬ್ಬರು ಮಾರ್ಗಮಧ್ಯೆ ದುರಂತ ಅಂತ್ಯ ಕಂಡ ಘಟನೆ ಶುಕ್ರವಾರ ಸಂಜೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಗ್ರಾಮದ ಬಳಿ ಸಂಭವಿಸಿದೆ. ಈ ಘಟನೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಗಂಭೀರ ಗಾಯಗೊಂಡಿದ್ದಾರೆ.

ಕುಣಿಗಲ್: ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ನರ್ಸ್​ವೊಬ್ಬರು ಮಾರ್ಗಮಧ್ಯೆ ದುರಂತ ಅಂತ್ಯ ಕಂಡ ಘಟನೆ ಶುಕ್ರವಾರ ಸಂಜೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಗ್ರಾಮದ ಬಳಿ ಸಂಭವಿಸಿದೆ. ಈ ಘಟನೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಗಂಭೀರ ಗಾಯಗೊಂಡಿದ್ದಾರೆ.

ಕುಣಿಗಲ್ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಕ್ಷ್ಮೀಬಾಯಿ ಅವರು ಡ್ಯೂಟಿ ಮುಗಿಸಿ ಇಪ್ಪಾಡಿಯಿಂದ ಮನೆಗೆ ಹೊರಟಿದ್ದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಇಪ್ಪಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯಶಿಕ್ಷಕ ಲಕ್ಷ್ಮಣ್ ಅವರ ಬೈಕ್ ಹತ್ತಿದ ಲಕ್ಷ್ಮೀಬಾಯಿ ಅವರು ಹಿಂಬದಿಯಲ್ಲಿ ಕುಳಿತಿದ್ದರು. ರಸ್ತೆಬದಿ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಕೇಬಲ್ ವೈರ್ ಶಾರ್ಟ್ ಸರ್ಕ್ಯೂಟ್ ನಿಂದ ತುಂಡಾಗಿ ಮುಖ್ಯಶಿಕ್ಷಕರ ಮೇಲೆ ಬಿದ್ದಿದೆ. ನಿಯಂತ್ರಣ ತಪ್ಪಿದ ಬೈಕ್‌ನಿಂದ ಕೆಳಗೆ ಬಿದ್ದ ನರ್ಸ್ ಲಕ್ಷ್ಮೀಬಾಯಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮುಖ್ಯಶಿಕ್ಷಕರ ಕುತ್ತಿಗೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಲಕ್ಷ್ಮೀಬಾಯಿ ಜಾದವ್ (36) ಮೃತ ದುರ್ದೈವಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟೆ ಮೂಲದ ಲಕ್ಷ್ಮೀಬಾಯಿ ಜಾದವ್ ಅವರು ಅಂಗವಿಕಲೆ. 2016ರ ಡಿಸೆಂಬರ್‌ನಲ್ಲಿ ನರ್ಸ್ ಆಗಿ ಇಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಸೇರಿದ್ದರು. ಸೇವೆಯ ಮೂಲಕವೇ ಇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಅವರಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಕಣ್ಣೀರು ಹಾಕುತ್ತಿದ್ದರು. ಇತ್ತೀಚಿಗೆ ಲಕ್ಷ್ಮೀಬಾಯಿ ಅವರಿಗೆ ಮದುವೆ ಕೂಡ ನಿಶ್ಚಿತವಾಗಿತ್ತು. ಇನ್ನೇನು ಹಸೆಮಣೆ ಏರಿ ದಾಂಪತ್ಯಕ್ಕೆ ಕಾಲಿಡಬೇಕಿದ್ದ ಮಗಳು ಬಾರದ ಲೋಕಕ್ಕೆ ಹೋಗಿದ್ದಾಳೆ ಎಂಬ ಸುದ್ದಿ ಕೇಳಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಲಕ್ಷ್ಮೀಬಾಯಿ ಅವರಿಗೆ ಇಬ್ಬರು ಸಹೋದರಿಯರಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಮಗಳನ್ನ ಕಳೆಕೊಂಡವರ ದುಖಃ ಹೇಳತೀರದು