ದಾದಿಯರು ತಾಯಿ ಸ್ವರೂಪ

| Published : May 22 2024, 12:59 AM IST

ಸಾರಾಂಶ

ಹಗಲು-ರಾತ್ರಿ ಎನ್ನದೇ ರೋಗಿಗಳ ಸೇವೆ ಮಾಡುವ ನರ್ಸ್ಗಳು ನಿಜಕ್ಕೂ ತಾಯಿ ಸ್ವರೂಪ ಎಂದು ಶ್ರೀಭಾಗ್ಯವಂತಿ ನರ್ಸಿಂಗ್ ಕಾಲೇಜ್ ಅಧ್ಯಕ್ಷೆ ಡಾ.ಸವಿತಾ ಈ ತಳ್ಳೊಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಗಲು-ರಾತ್ರಿ ಎನ್ನದೇ ರೋಗಿಗಳ ಸೇವೆ ಮಾಡುವ ನರ್ಸ್‌ಗಳು ನಿಜಕ್ಕೂ ತಾಯಿ ಸ್ವರೂಪ ಎಂದು ಶ್ರೀಭಾಗ್ಯವಂತಿ ನರ್ಸಿಂಗ್ ಕಾಲೇಜ್ ಅಧ್ಯಕ್ಷೆ ಡಾ.ಸವಿತಾ ಈ ತಳ್ಳೊಳ್ಳಿ ಹೇಳಿದರು.

ಮಂಗಳವಾರ ಶ್ರೀಭಾಗ್ಯವಂತಿ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶ್ರೀಭಾಗ್ಯವಂತಿ ನರ್ಸಿಂಗ್ ಕಾಲೇಜ್‌ನಲ್ಲಿ ಏರ್ಪಡಿಸಲಾದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ತನ್ನದೇ ಕೊಡುಗೆ ನೀಡಿದ ವಿಶ್ವ ವಿಖ್ಯಾತ ನರ್ಸ್ ಫ್ಲಾರೆನ್ಸ್ ನೈಟಿಂಗೇಲ್ ಅವರ ದಿನವನ್ನು ಪ್ರತಿವರ್ಷ ದಾದಿಯರ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಫ್ಲಾರೆನ್ಸ್ ನೈಟಿಂಗೇಲ್ ೧೨ ಮೇ ೧೮೨೦ ರಲ್ಲಿ ಇಟಲಿಯ ಫ್ಲಾರೆನ್ಸ್‌ನಲ್ಲಿ ಜನಿಸಿದರು. ನೈಟಿಂಗೇಲ್ ಅವರನ್ನು ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ಆಕೆ ಸಮಾಜ ಸುಧಾರಕಿ ಹಾಗೂ ಸಂಖ್ಯಾಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದರು. ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಅವರು ನೀಡಿದ ಕೊಡುಗೆ ಅಪಾರವಾದುದು. ಅಷ್ಟೇ ಅಲ್ಲ, ೧೫೦ಕ್ಕೂ ಹೆಚ್ಚು ಪುಸ್ತಕಗಳು, ಕರಪತ್ರಗಳು ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ವರದಿಗಳನ್ನು ಬರೆದಿದ್ದಾರೆ. ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಲೇಡಿ ವಿತ್ ದಿ ಲ್ಯಾಂಪ್'''' ಎಂದೂ ಕರೆಯಲಾಗುತ್ತದೆ. ೧೮೫೩-೧೮೫೬ರ ನಡುವೆ ಜರುಗಿದ ಕ್ರೈಮನ್ ಯುದ್ಧದ ವೇಳೆ ಗಾಯಗೊಂಡಿದ್ದ ಸಾವಿರಾರು ಬ್ರಿಟಿಷ್ ಸೈನಿಕರನ್ನು ಆಕೆ ಆರೈಕೆ ಮಾಡಿದ್ದರು. ಇದನ್ನು ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ ಆರೋಗ್ಯ ಸಮಸ್ಯೆಯಿಂದ ಬರುವ ಪ್ರತಿಯೊಬ್ಬರಿಗೂ ಆರೈಕೆ ಮಾಡುವ ದಾದಿಯರು ತಾಯಿಯ ಸ್ವರೂಪವನ್ನು ಪಡೆದಿದ್ದಾರೆ ಅಂತವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಅನಿಲ ಪತ್ರಿಮಠ ಅವರು ಮಾತನಾಡಿ, ೧೮೬೦ರಲ್ಲಿ ಲಂಡನಿನಲ್ಲಿ ಫ್ಲಾರೆನ್ಸ್ ನೈಟಿಂಗೇಲ್, ಸೆಂಟ್ ಥಾಮಸ್ ಹೆಸರಿನ ಆಸ್ಪತ್ರೆಯೊಂದರನ್ನು ತೆರೆದು ನೂರಾರು ಮಹಿಳೆಯರಿಗೆ ಕೆಲಸ ನೀಡಿದರು. ಈ ಮೂಲಕ ವೃತ್ತಿಪರ ಶುಶ್ರೂಷೆಯ ಅಡಿಪಾಯ ಹಾಕಿದರು. ಇದು ಅವರಿಗೆ ಮತ್ತಷ್ಟು ಹೆಸರು ನೀಡಿತು. ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವೆಗಾಗಿ ೧೯೦೭ರಲ್ಲಿ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ದಾದಿಯರು ಎಂದರೆ ನಮ್ಮ ವೈರಿಗಳಿಗೆ ಸೇವೆ ನೀಡುವ ಗುಣಹೊಂದಿದಂತಹ ತಾಯಂದಿರರಾಗಿದ್ದಾರೆ ಅವರ ಸೇವೆಯಿಂದ ಭಾರತ ರೋಗಮುಕ್ತವಾಗಿ ನಿಲ್ಲಲು ಕಾರಣವಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ನಮ್ಮ ನರ್ಸ್ ನಮ್ಮ ಭವಿಷ್ಯ ಸೇವೆಯ ಆರ್ಥಿಕ ಶಕ್ತಿ ವಿಷಯದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ರಂಗೋಲಿ ಮತ್ತು ಚಿತ್ರಕಲಾ ಪ್ರತಿಯೊಗಿತ್ವಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಈ ಸಮಯದಲ್ಲಿ ಸುವರ್ಣ ಹಿರೇಮಠ, ಅಕ್ಷತ ಬಾಬನ್ನವರ, ಅಶ್ವಿನಿ, ವಿನಯ ಮಡಿವಾಳ, ಜ್ಯೋತಿ ಹೂಗಾರ, ಕಾವ್ಯ ಕಾಮನಕೇರಿ, ನಜ್ಮಾ ಹಕೀಮ್ ಉಪಸ್ಥಿತರಿದ್ದರು.