ಸಾರಾಂಶ
ವೈದ್ಯರು ರೋಗಿಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನಡೆಸಿದ ನಂತರ ರೋಗಿಯ ಆರೋಗ್ಯ ಸುಧಾರಣೆಯ ಹೊಣೆ ಶುಶ್ರೂಷಕರ ಮೇಲಿರುತ್ತದೆ. ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗುವ ಪ್ರತಿರೋಗಿಗಳಿಗೆ ಹೆಚ್ಚಿನ ಆರೋಗ್ಯ ಕಾಳಜಿಯ ಅಗತ್ಯವಿದೆ.
ಹುಬ್ಬಳ್ಳಿ:
ತುರ್ತು ಚಿಕಿತ್ಸಾ ಘಟಕವು ಆಸ್ಪತ್ರೆಯಲ್ಲಿನ ಪ್ರಮುಖ ವಿಭಾಗಗಳಲ್ಲಿ ಒಂದಾಗಿದ್ದು, ತೀವ್ರ ಅಸ್ವಸ್ಥ ರೋಗಿಗಳ ತುರ್ತು ಆರೈಕೆಯಲ್ಲಿ ಶುಶ್ರೂಷಕರು ನಿರ್ವಹಿಸಬೇಕಾದ ವೃತ್ತಿ ಕೌಶಲ್ಯ, ಕೈಗೊಳ್ಳಬಹುದಾದ ಕ್ಷಿಪ್ರ ಕ್ರಮಗಳ ಬಗ್ಗೆ ಅರಿವು ಮೂಡಿಸಲು ತರಬೇತಿ ಕಾರ್ಯಾಗಾರ ಅತ್ಯಗತ್ಯ ಎಂದು ಶ್ರೀಬಾಲಾಜಿ ಆಸ್ಪತ್ರೆ ಚೇರ್‌ಮನ್ ಹಾಗೂ ನರರೋಗ ತಜ್ಞ ಡಾ. ಕ್ರಾಂತಿಕಿರಣ ತಿಳಿಸಿದರು.ಮುಂಬೈನ ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಆ್ಯಂಡ್ ಮಿನಿಮಲ್ ಅಕ್ಸೆಸ್ ಸರ್ಜರಿ ಟ್ರೈನಿಂಗ್ (ಐಎಂಎಂಎಎಸ್‌ಟಿ) ಸಂಸ್ಥೆ ವತಿಯಿಂದ ನಿರಂತರ ನರ್ಸಿಂಗ್ ಶಿಕ್ಷಣ (ಸಿಎನ್ಇ)ದಡಿ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ "ಕ್ರಿಟಿಕಲ್ ಕೇರ್ ನರ್ಸಿಂಗ್ ಎಕ್ಸ್‌ಲೆನ್ಸ್ " ವಿಷಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ರೋಗಿಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನಡೆಸಿದ ನಂತರ ರೋಗಿಯ ಆರೋಗ್ಯ ಸುಧಾರಣೆಯ ಹೊಣೆ ಶುಶ್ರೂಷಕರ ಮೇಲಿರುತ್ತದೆ. ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗುವ ಪ್ರತಿರೋಗಿಗಳಿಗೆ ಹೆಚ್ಚಿನ ಆರೋಗ್ಯ ಕಾಳಜಿಯ ಅಗತ್ಯವಿದ್ದು, ಇಂಥ ಸಂದರ್ಭದಲ್ಲಿ ಕೆಲ ನಿಮಿಷಗಳ ವಿಳಂಬವು ಸಹ ರೋಗಿಯ ಜೀವಕ್ಕೆ ಹಾನಿಯನ್ನುಂಟು ಮಾಡಬಹುದಾಗಿದೆ. ಆದ್ದರಿಂದ ತೀವ್ರ ಅಸ್ವಸ್ಥ ರೋಗಿಗಳ ಆರೈಕೆಯಲ್ಲಿ ಶುಶ್ರೂಷಕರು ನಿರ್ವಹಿಸಬೇಕಾದ ವೃತ್ತಿ ಕೌಶಲ್ಯಗಳು, ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರ ಹಾಗೂ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ನುರಿತ ತಜ್ಞರಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಆಸ್ಪತ್ರೆಯ ಎಲ್ಲ ಶುಶ್ರೂಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.ಮುಂಬೈನ ಐಎಂಎಂಎಎಸ್‍ಟಿಯ ತರಬೇತುದಾರೆ ಡಾ. ವಿದ್ಯುನ್ಮಾಲ ಅಗರವಾಲ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಶುಶ್ರೂಷಕರಿಗೆ ತಾಳ್ಮೆ ಹಾಗೂ ಮಾನವೀಯ ಗುಣಗಳ ಜತೆಗೆ ವೃತ್ತಿ ನಾವೀನ್ಯತೆ, ಕೌಶಲ್ಯವೃದ್ಧಿಗೆ ನಿರಂತರ ಕಲಿಕೆ ಹಾಗೂ ತರಬೇತಿ ಕಾರ್ಯಾಗಾರ ಅತ್ಯಗತ್ಯ ಎಂದರು.
ತರಬೇತುದಾರರಾದ ಡಾ. ಇಂದ್ರಶ್ರೀ ದುಸಾನೆ, ಡಾ. ಪ್ರಶಾಂತ ಮುಲಿಕ್, ಶುಶ್ರೂಷಕರಿಗೆ ತುರ್ತು ಆರೈಕೆ ಸಂದರ್ಭದಲ್ಲಿನ ಕೆಲ ಚಿಕಿತ್ಸೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಆಸ್ಪತ್ರೆಯ 35ಕ್ಕೂ ಹೆಚ್ಚು ಶುಶ್ರೂಷಕ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ತರಬೇತಿ ಪಡೆದರು.