ದಾದಿಯರು ಆರೋಗ್ಯ ಸೇವೆಗಳ ಬೆನ್ನೆಲುಬು: ಡಾ. ಮಂಜುನಾಥ್

| Published : May 15 2024, 01:32 AM IST

ಸಾರಾಂಶ

ಜೆಎಸ್‌ಎಸ್ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದಾದಿಯರು ಆರೋಗ್ಯ ಸೇವೆಗಳ ಬೆನ್ನೆಲುಬು, ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಗರದ ವೈದ್ಯಕೀಯ ಕಾಲೇಜಿನ ನಿರ್ದೇಶಕ ಹಾಗೂ ಡೀನ್ ಡಾ. ಮಂಜುನಾಥ್ ಎಚ್.ಪಿ ಹೇಳಿದರು.

ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ವರ್ಷದ ಘೋಷವಾಕ್ಯ ನಮ್ಮ ದಾದಿಯರು ನಮ್ಮ ಭವಿಷ್ಯ, ಆರ್ಥಿಕ ಶಕ್ತಿಯ ಆರೈಕೆದಾರರು ಎಂದರು. ನರ್ಸಿಂಗ್ ವೃತ್ತಿಯಲ್ಲಿ ಪ್ಯಾಷನ್ ಇರಬೇಕು. ಪ್ಯಾಷನ್ ಇದ್ದರೆ ವೃತ್ತಿಯಲ್ಲಿ ಮುಂದೆ ಬರಲು ಸಾಧ್ಯ.

ಜನರ ಆರೋಗ್ಯ ವ್ಯವಸ್ಥೆ ಚೆನ್ನಾಗಿರಬೇಕಾದರೆ ನರ್ಸಿಂಗ್ ವೃತ್ತಿಯಲ್ಲಿರುವವರು ಚೆನ್ನಾಗಿ ಕೆಲಸ ಮಾಡಬೇಕಾಗುತ್ತದೆ. ಆರೋಗ್ಯ ಸೇವೆ ಎಲ್ಲಿ ಅಗತ್ಯವಿರುತ್ತದೆ ಅಲ್ಲಿಗೆ ನರ್ಸಿಂಗ್ ವೃತ್ತಿ ಮಾಡುವವರು ಅಗತ್ಯವಿರಬೇಕು. ರೋಗಿಗಳ ಮೇಲೆ ಅನುಕಂಪವಿರಬೇಕು:

ದಾದಿಯರ ವೃತ್ತಿಯನ್ನು ಕಾಯಾ, ವಾಚಾ, ಮನಸ್ಸಿನಿಂದ ಮಾಡಬೇಕು. ನರ್ಸಿಂಗ್ ಸೇವೆ ಮಾಡುವವರಿಗೆ ರೋಗಿಗಳ ಮೇಲೆ ಅನುಕಂಪ ಇರಬೇಕು. ರೋಗಿಗಳ ಮೇಲೆ ಅನುಕಂಪ ತೊರುವುದರಿಂದಲೇ ನರ್ಸಿಂಗ್ ವೃತ್ತಿಯನ್ನು ನೋಬಲ್ ವೃತ್ತಿ ಎಂದು ಹೇಳಲಾಗುತ್ತಿದೆ. ನರ್ಸಿಂಗ್ ವೃತ್ತಿಯಲ್ಲಿರುವವರು ಪಾಲಿಸಬೇಕಿರುವುದು ರೋಗಿಯನ್ನು ಅರ್ಥಮಾಡಿಕೊಳ್ಳಬೇಕು, ನಿರಂತರವಾಗಿ ಗಮನಿಸಬೇಕು, ತಾತ್ಸರ ಮನೋಭಾವನೆಯನ್ನು ಇಟ್ಟುಕೊಳ್ಳದೇ ಕರುಣೆ ತೋರಿ ನೋಡಿಕೊಳ್ಳಬೇಕು.

ನರ್ಸಿಂಗ್ ವೃತ್ತಿಯಲ್ಲಿರುವವರು ರೋಗಿಗೆ ಒಳ್ಳೆಯ ಸೇವೆಯನ್ನು ಕೊಟ್ಟರೆ ಅವರಿಗೆ ಹಾಗೂ ಅವರು ಕೆಲಸ ಮಾಡುವ ಆಸ್ಪತ್ರೆಗೆ ಒಳ್ಳೇಯ ಹೆಸರು ಬರುತ್ತದೆ ಎಂದರು.ನರ್ಸ್‌ಗಳ ಸೇವೆ ಡೊಡ್ಡದು: ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಅಲ್ಲಿ ವೈದ್ಯರಷ್ಟೇ ರೋಗಿಗಳನ್ನು ಶುಶ್ರೂಷೆ ಮಾಡುವವರು ದಾದಿಯರು. ಹಗಲು ರಾತ್ರಿ ಎನ್ನದೆ, ರೋಗಿಗಳ ಸೇವೆ ಮಾಡುವ ನರ್ಸ್‌ಗಳು ನಿಜಕ್ಕೂ ಅವರ ಸೇವೆ ದೊಡ್ಡದು ಎಂದರು.

ನರ್ಸಿಂಗ್‌ ವೃತ್ತಿಗೆ ವಿಶೇಷ ಸ್ಥಾನಮಾನವಿದೆ:

ಸಿಮ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ. ಮಹೇಶ್ ಮಾತನಾಡಿ, ಯಾವುದೇ ಸ್ವಾರ್ಥವಿಲ್ಲದೇ ನೈಟಿಂಗೇಲ್ ಅವರು ಈ ಸಮಾಜಕ್ಕೆ, ಮಾನವ ಕುಲಕ್ಕೆ ನೀಡಿದ ಸೇವೆ, ತ್ಯಾಗವನ್ನು ನಾವೆಲ್ಲರೂ ಸ್ಮರಿಸಲೇಬೇಕು. ಅವರು ತಾವು ಮಾಡಿದ ಒಳ್ಳೆಯ ಸೇವೆಯನ್ನು ದಾಖಲಿಸಿದ್ದರಿಂದಲೇ ಇಂದು ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ, ನೀವು ಮುಂದಿನ ದಿನಗಳಲ್ಲಿ ನೀವು ಮಾಡಿದ ಒಳ್ಳೆಯ ಸೇವೆಗಳನ್ನು ದಾಖಲಿಸಿಡಿ ಎಂದು ಸಲಹೆ ನೀಡಿ, ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿಗೆ ವಿಶೇಷ ಸ್ಥಾನಮಾನವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಗರದ ಜೆಎಸ್‌ಎಸ್ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್‌.ಎಂ. ಸ್ವಾಮಿ ಒಳ್ಳೆಯ ಸೇವೆ ಮಾಡಿದವರನ್ನು ಜನರು ಸದಾ ನೆನಪಿಕೊಳ್ಳುತ್ತಾರೆ. ಅವರನ್ನು ನೆನೆಯುವುದು ಪುಣ್ಯದ ಕೆಲಸ. ಈ ಮೂಲಕ ಅವರ ಸೇವಾ ಮನೋಭಾವವು ಇತರರಿಗೆ ಸ್ಫೂರ್ತಿಯಾಗಲಿ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ್ ಮೇ.೧೨ರಂದು ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಜನ್ಮತಾಳಿದ ದಿನವಾಗಿದೆ. ನೈಟಿಂಗೇಲ್ ಅವರನ್ನು ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಎಂದು ಕರೆಯಲಾಗುತ್ತದೆ ಎಂದರು. ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಅವರು ನೀಡಿದ ಕೊಡುಗೆ ಅಪಾರವಾದುದು. ಅಷ್ಟೇ ಅಲ್ಲ, ೧೫೦ಕ್ಕೂ ಹೆಚ್ಚು ಪುಸ್ತಕಗಳು, ಕರಪತ್ರಗಳು ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ವರದಿಗಳನ್ನು ಬರೆದಿದ್ದಾರೆ. ೧೮೫೩-೧೮೫೬ ರ ನಡುವೆ ಜರುಗಿದ ಯುದ್ಧದ ವೇಳೆ ಗಾಯಗೊಂಡಿದ್ದ ಸಾವಿರಾರು ಬ್ರಿಟಿಷ್ ಸೈನಿಕರನ್ನು ಆಕೆ ಆರೈಕೆ ಮಾಡಿದ್ದರು. ಇದನ್ನು ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ ಎಂದರು.ನಗರದ ಜೆಎಸ್‌ಎಸ್ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಿಕಾಸ್ ನಂದಿ ಎನ್, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ರಾಣಿ, ಮಂಜುನಾಥ್, ಮಧು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.