ರೋಗಿಗಳ ಮನೋಧೈರ್ಯ ಹೆಚ್ಚಿಸುವ ಶುಶ್ರೂಷಕರ ಬಗ್ಗೆ ಕೀಳರಿಮೆ ಸಲ್ಲದು

ಹಾವೇರಿ: ಆರೋಗ್ಯ ಚೆನ್ನಾಗಿದ್ದರೆ ಮನುಷ್ಯ ಏನೆಲ್ಲ ಸಾಧನೆ ಮಾಡಬಹುದು. ಅನಾರೋಗ್ಯದ ಸಂದರ್ಭದಲ್ಲಿ ತಾಯಿಯ ನಂತರ ಹೆಚ್ಚಿನ ಕಾಳಜಿ ಮಾಡುವವರು ಶುಶ್ರೂಷಕರು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ತಿಳಿಸಿದರು.

ನಗರದ ಸಿದ್ಧರಾಮೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾಂಗೆ ಎಜ್ಯುಕೇಶನ್ ಸೊಸೈಟಿಯ ಐದನೇ ವಾರ್ಷಿಕೋತ್ಸವ, 2025- 26ನೇ ಸಾಲಿನ ದೀಪಧಾರಣೆ ಹಾಗೂ ಸಾಂಸ್ಕೃತಿಕ ಕಲಾ ವೈಭವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಧಾರ್ಮಿಕ ತಳಹದಿಯ ಮೇಲೆ ವಿಶ್ವಾಸವಿಟ್ಟ ಡಾ. ಡಾಂಗೆಯವರು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾರ್ಥಕ ಸೇವೆ ಅನನ್ಯ. ಜತೆಗೆ ಶೋಷಿತರ ಪರ ನಿಲ್ಲುವ ಮತ್ತು ಬಡವರ ಬಗೆಗಿನ ಅವರ ಕಾಳಜಿ ಅಭಿನಂದನೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಡಾ.ಸಂಜಯಕುಮಾರ ಡಾಂಗೆ ತಮ್ಮ ಸತತ ಪ್ರಯತ್ನದಿಂದ ಆರೋಗ್ಯ ಸೇವೆಗೆ ಶ್ರಮಿಸುತ್ತಿರುವರು. ನರ್ಸಿಂಗ್, ಪ್ಯಾರಾ ಮೆಡಿಕಲ್ ಹಾಗೂ ಹೆಲ್ತ್ ಸೈನ್ಸ್ ಕ್ಷೇತ್ರದ ವೃದ್ಧಿಗೆ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ಕಾಳಜಿಯಿಂದ ಸಮಾಜ ಸೇವೆ ಮಾಡುತ್ತಿರುವ ಅವರ ಸೇವೆ ನಿರಂತರವಾಗಿರಲಿ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ರೋಗಿಗಳ ಮನೋಧೈರ್ಯ ಹೆಚ್ಚಿಸುವ ಶುಶ್ರೂಷಕರ ಬಗ್ಗೆ ಕೀಳರಿಮೆ ಸಲ್ಲದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಸಂಜಯ ಡಾಂಗೆ, ಕಳೆದ ಮೂರು ದಶಕಗಳಿಂದ ಚರ್ಮರೋಗ ತಜ್ಞನಾಗಿ ಸೇವೆ ಸಲ್ಲಿಸುತ್ತಿರುವೆ. ಈ ಭಾಗದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ಶುಶ್ರೂಷಕರ ಕೊರತೆ ಇತ್ತು. ಈ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಡಾಂಗೆ ಎಜ್ಯುಕೇಶನ್ ಸೊಸೈಟಿ ಮೂಲಕ ಶುಶ್ರೂಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಹಾವೇರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿದರು. ಬೌದ್ಧ ಬಿಕ್ಕು ಕಮಲನಾಥ್ ಬಂಥೇಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಸಂಜಯಕುಮಾರ ಡಾಂಗೆ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ.ಮೈದೂರ, ಪ್ರಭುಗೌಡ ಬಿಷ್ಟನಗೌಡ್ರ, ಪರಶುರಾಮ ಅಡಕಿ, ಸಿ.ಬಿ. ಕುರವತ್ತಿಗೌಡ್ರ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಬಸಣ್ಣ ಹೆಡಿಗೊಂಡ, ಶಂಕ್ರಣ್ಣ ಮಕರಬ್ಬಿ, ಶ್ರೀಧರ ದೊಡ್ಡಮನಿ, ಹನುಮಂತಗೌಡ ಗೊಲ್ಲರ, ಪ್ರಾಂಶುಪಾಲೆ ಸರಸ್ವತಿ ವೈ.ಎಚ್. ಇದ್ದರು.

ಇದೇ ಸಂದರ್ಭದಲ್ಲಿ ರವಿಕುಮಾರ ಟಿ., ರಬ್ಬಾನಿ ಹುಲಗೇರಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ದೀಪಧಾರಣೆ ಹಾಗೂ ಬಳಿಕ ಸಾಂಸ್ಕೃತಿಕ ಕಲಾ ವೈಭವ ಜರುಗಿತು. ನಾಗರಾಜ ನಡುವಿನಮಠ ನಿರ್ವಹಿಸಿದರು.