ದಾದಿಯರು ರೋಗಿಯ ಹಕ್ಕು ಗೌಪ್ಯತೆ ಕಾಪಾಡಬೇಕು: ಡಾ.ಪ್ರೇಮಾನಂದ

| Published : Mar 05 2024, 01:33 AM IST

ಸಾರಾಂಶ

ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ನರ್ಸಿಂಗ್ ವೃತ್ತಿಗೆ ಪದಾರ್ಪಣೆ ಮಾಡುವ ವಿದ್ಯಾರ್ಥಿಗಳ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಕೆ. ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ನರ್ಸಿಂಗ್ ವೃತ್ತಿಗೆ ಪದಾರ್ಪಣೆ ಮಾಡುವ ವಿದ್ಯಾರ್ಥಿಗಳ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಮುಖ್ಯ ಅತಿಥಿಯಾದ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಕೆ. ಕಾರ್ಯಕ್ರಮ ಉದ್ಘಾಟಿಸಿ, ದಾದಿಯರು ಸೇವೆ ಸಲ್ಲಿಸುವಾಗ ರೋಗಿಯ ಹಕ್ಕನ್ನು ಕಾಪಾಡುವುದರ ಜೊತೆಗೆ ಗೌಪ್ಯತೆಯನ್ನು ಪಾಲನೆ ಮಾಡಬೇಕು. ನಾವು ಮೊದಲು ಶಿಕ್ಷಣದಿಂದ ನಮ್ಮನ್ನು ಗಟ್ಟಿಗೊಳಿಸಿ, ಶ್ರದ್ಧೆ ಮತ್ತು ಸೇವಾ ಮನೋಭಾವದಿಂದ ಇತರರಿಗೆ ಮಾರ್ಗದರ್ಶಿಯಾಗಬೇಕು ಎಂದು ಕರೆ ನೀಡಿದರು.ಕೋಟ ಆಶ್ರಿತ್ ಸ್ಕೂಲ್ ಆ್ಯಂಡ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲ ಪ್ರೊ.ಮೋಹನ್‌ ಎಸ್. ಮಾತನಾಡಿ, ಫ್ಲಾರೆನ್ಸ್ ನೈಟಿಂಗೇಲ್ ಸಾಗಿ ಬಂದ ಹಾದಿಯ ಕುರಿತು ಹಾಗೂ ದಿನದ ಮಹತ್ವದ ಬಗ್ಗೆ ತಿಳಿಸಿ, ದಾದಿಯವರ ಸೇವಾ ಬದುಕಿಗೆ ಶುಭ ಹಾರೈಸಿದರು.ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೆನ್ನಿಫರ್ ಫ್ರೀಡಾ ಮಿನೇಜಸ್, ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಜ್ಞಾ ಸ್ವೀಕಾರ ವಿಧಾನವನ್ನು ವಾಚಿಸುವ ಮೂಲಕ, ದಾದಿಯರಿಗೆ ಸೇವೆ, ಜ್ಞಾನ, ಪ್ರೀತಿ, ಬದ್ಧತೆ, ಸಹಾನುಭೂತಿ, ಸಮರ್ಪಣೆ ಮತ್ತು ಶಿಸ್ತಿನ ಕಿವಿಮಾತು ಹೇಳಿದರು.ಮೂಡ್ಲಕಟ್ಟೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಫಸಲ್ ರಹಮಾನ್ ಎಂ.ಟಿ. ಉಪಸ್ಥಿತರಿದ್ದರು. ಕಾಲೇಜಿನ ಉಪ್ರಾಂಶುಪಾಲೆ ಪ್ರೊ.ರೂಪಾಶ್ರೀ ಕೆ.ಎಸ್‌. ಸ್ವಾಗತಿಸಿದರು. ಸಹಾಯಕ ಉಪನ್ಯಾಸಕಿ ರಕ್ಷಿತಾ ವಂದಿಸಿದರು. ವೆಲ್ಮೇರಾ ಡಯಾಸ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ನರ್ಸಿಂಗ್‌ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.