ನರ್ಸಿಂಗ್ ಶಿಕ್ಷಣ ಇಂದು ಬೇಡಿಕೆಯ ಕ್ಷೇತ್ರವಾಗಿದೆ: ಡಾ. ಶರಣಪ್ರಕಾಶ ಪಾಟೀಲ

| Published : May 24 2025, 12:32 AM IST

ನರ್ಸಿಂಗ್ ಶಿಕ್ಷಣ ಇಂದು ಬೇಡಿಕೆಯ ಕ್ಷೇತ್ರವಾಗಿದೆ: ಡಾ. ಶರಣಪ್ರಕಾಶ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನರ್ಸಿಂಗ್ ಶಿಕ್ಷಣ ಇಂದು ಅತ್ಯಂತ ಬೇಡಿಕೆಯ ಮತ್ತು ಆದ್ಯತೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಗದಗ: ನರ್ಸಿಂಗ್ ಶಿಕ್ಷಣ ಇಂದು ಅತ್ಯಂತ ಬೇಡಿಕೆಯ ಮತ್ತು ಆದ್ಯತೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಅವರು ಶುಕ್ರವಾರ ಗದಗ ಹೊರವಲಯದಲ್ಲಿರುವ ಭರತ್ ಮೆಘಾ ಸಿಟಿಯಲ್ಲಿ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ನರ್ಸಿಂಗ್ ಕೋರ್ಸ್‌ಗಳಿಗೆ ಇಂದು ಬಹು ಬೇಡಿಕೆ ಇದ್ದು, ನರ್ಸಿಂಗ್ ವಿದ್ಯಾರ್ಥಿಗಳು ವಿದೇಶಿ ಭಾಷೆಗಳ ಜ್ಞಾನವನ್ನು ಹೊಂದಿದ್ದರೆ ವಿದೇಶಗಳಲ್ಲಿಯೂ ಈ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಹೆಚ್ಚಿನ ಆದ್ಯತೆ ಇದೆ. ಭಾರತೀಯ ವೈದ್ಯಕೀಯ ಶಿಕ್ಷಣ ಪಡೆದವರಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣವನ್ನು ಶೃದ್ಧೆಯಿಂದ ಅಧ್ಯಯನ ಮಾಡಬೇಕು ಎಂದರು.ನರ್ಸಿಂಗ್ ಮತ್ತು ವೈದ್ಯಕೀಯ ಕಾಲೇಜ್‌ಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಅಂತಹ ಕಾಲೇಜಿಗಳ ಮಾನ್ಯತೆಯನ್ನು ರದ್ದುಪಡಿಸಲಾಗುವದು ಎಂದ ಸಚಿವ ಡಾ. ಶರಣಪ್ರಕಾಶ ಪಾಟೀಲ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್‌ನ ಅತ್ಯಾಧುನಿಕ ಮೂಲಭೂತ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಗದಗ ಪರಿಸರಕ್ಕೆ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ನೂತನ ಕಟ್ಟಡ ಮಾದರಿಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆಯುವ ಮೂಲಕ ಮಾದರಿ ಕಾಲೇಜ್ ಆಗಿ ಮುನ್ನಡೆದಿದ್ದು, ಸಕಲ ಮೂಲಭೂತ ಸೌಲಭ್ಯಗಳೊಂದಿಗೆ ಮುಂಚೂಣಿಯಲ್ಲಿದೆ. ದೂರ ದೃಷ್ಟಿಯುಳ್ಳ ವಿಪ ಸದಸ್ಯ ಎಸ್.ವ್ಹಿ. ಸಂಕನೂರ, ಡಾ. ಪ್ರಕಾಶ ಸಂಕನೂರ ಗದಗ ಪರಿಸರಕ್ಕೆ ಒಳ್ಳೆ ಕೊಡುಗೆ ನೀಡಿದ್ದಾರೆ ಎಂದರು.

ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ವೈದ್ಯರು ಎಷ್ಟು ಮುಖ್ಯವೋ ನರ್ಸಿಸ್‌ಗಳೂ ಅಷ್ಟೇ ಮುಖ್ಯ, ಇವರ ಪರಿಶ್ರಮದಿಂದ ರೋಗಿ ಆರೋಗ್ಯ ಹೊಂದಲು ಸಾಧ್ಯ ಎಂಬುದಕ್ಕೆ ನಾನೇ ಉದಾಹರಣೆ. ನನಗೆ ಗುಂಡು ತಾಕಿದಾಗ ವೈದ್ಯರು ಮತ್ತು ನರ್ಸಗಳು ನೀಡಿದ ಸೇವೆ ಅನುಪಮವಾದದ್ದು ಅವರ ಸೇವೆಯನ್ನು ಜೀವನದುದ್ದಕ್ಕೂ ಮರೆಯಲಾರೆ ಎಂದರು.

ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಪ ಸದಸ್ಯ ಎಸ್.ವ್ಹಿ. ಸಂಕನೂರ ಮುಂತಾದವರು ಮಾತನಾಡಿದರು. ವಿನ್ಸೆಂಟ್ ಪಾಟೀಲ ಸ್ವಾಗತಿಸಿದರು. ಬಾಹುಬಲಿ ಜೈನರ್, ದತ್ತಪ್ರಸನ್ನ ಪಾಟೀಲ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಭರತ್ ಬೊಮ್ಮಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಬಬರ್ಚಿ, ಸಿನೆಟ್ ಸದಸ್ಯ ಡಾ. ವೀರೇಶ ಹಂಚಿನಾಳ, ಅನಸೂಯಾ ಬೆಟಗೇರಿ, ಡಾ. ಪ್ರಕಾಶ ಸಂಕನೂರ, ಡಾ. ಶ್ವೇತಾ ಸಂಕನೂರ, ಮೋಹನ ಸಿದ್ಧಾಂತಿ, ಮೀನಾಕ್ಷಿ ದೇವಾಂಗಮಠ, ಶ್ರೀಮತಿ ಶರಣಮ್ಮ ಸಂಕನೂರ, ಸಂಕನೂರ ಸಹೋದರರು ಉಪಸ್ಥಿತರಿದ್ದರು.ದೇಶದಲ್ಲಿಯೇ ತಮಿಳನಾಡು 73 ಮೆಡಿಕಲ್ ಕಾಲೇಜ್‌ಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ. ನಮ್ಮ ರಾಜ್ಯ 71 ಕಾಲೇಜ್‌ಗಳೊಂದಿಗೆ 2ನೇ ಸ್ಥಾನದಲ್ಲಿದೆ. ಮೆಡಿಕಲ್ ಸೀಟುಗಳನ್ನು ಗಣನೆಗೆ ತೆಗೆದುಕೊಂಡರೆ ದೇಶದಲ್ಲಿಯೇ ನಾವು ಮೊದಲ ಸ್ಥಾನದಲ್ಲಿದ್ದೇವೆ. ಆರೋಗ್ಯ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರಕ್ಕೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಪಾರದರ್ಶಕತೆ ತಂದು, ಮೆರಿಟ್ ಮೇಲೆ ಸೀಟುಗಳನ್ನು ಪಡೆಯಲು ಸಿಇಟಿ, ನೀಟ್ ಪದ್ಧತಿಯನ್ನು ಜಾರಿಗೊಳಿಸಿ ದೇಶಕ್ಕೆ ಮಾದರಿ ಹಾಕಿ ಕೊಟ್ಟಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು.

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಸ್ತಾವನೆ: ಗದಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಮುಂದಿನ ಬಜೆಟ್‌ದಲ್ಲಿ ಮುಖ್ಯಮಂತ್ರಿಗಳ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು, ಆ ಮೂಲಕ ಗದಗ ಜಿಲ್ಲೆಯ ಜನರ ಬಹು ದಶಕಗಳ ಬೇಡಿಕೆ ಈಡೇರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಭರವಸೆಯ ಮಾತುಗಳನ್ನು ಆಡಿದರು.