ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗವೈದ್ಯರು ಮತ್ತು ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದುದು. ವಿದೇಶದಲ್ಲಿ ಶುಶ್ರೂಷಕ ಕೆಲಸಗಳಿಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಶುಶ್ರೂಷಕರು ಕಣ್ಣಿಗೆ ಕಾಣುವ ದೇವರು ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ. ರಘುಚಂದನ್ ಹೇಳಿದರು.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಎಸ್ಎಲ್ ವಿ ಕಾಲೇಜ್ ಆಫ್ ನರ್ಸಿಂಗ್ ಮತ್ತು ವೆಂಕಟೇಶ್ವರ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.
25 ವರ್ಷಗಳ ಹಿಂದೆ ನರ್ಸಿಂಗ್ ಕಾಲೇಜು ಆರಂಭಗೊಂಡಾಗ ಕೇರಳದ ಹೆಚ್ಚು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದರು. ಈಗ ಅವರು ಅಮೇರಿಕಾ, ಲಂಡನ್, ಆಸ್ಟ್ರೇಲಿಯಾ, ದುಬೈ, ಅರಬ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಈ ವರ್ಷ ನರ್ಸಿಂಗ್ ಕಾಲೇಜಿಗೆ ದಾಖಲಾಗಿರುವ ನೀವೂ ಶಿಕ್ಷಣದ ಕಡೆ ಗಮನ ಕೊಟ್ಟು ಚೆನ್ನಾಗಿ ಓದಿ ನಮ್ಮ ಸಂಸ್ಥೆಗೆ ಕೀರ್ತಿ ತರುವಂತೆ ಮನವಿ ಮಾಡಿದರು.ಆರೋಗ್ಯದಲ್ಲಿ ಏನಾದರೂ ಏರುಪೇರಾದಾಗ ಆಸ್ಪತ್ರೆಗೆ ಬರುವವರಿಗೆ ಮಾನವೀಯತೆಯಿಂದ ಚಿಕಿತ್ಸೆ ನೀಡಿ. ಅಮೂಲ್ಯವಾದ ಪ್ರಾಣ ಉಳಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಹಾಗಾಗಿ ನರ್ಸಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ನಿಮ್ಮ ಗುರಿ ಶಿಕ್ಷಣದ ಕಡೆಯಿರಬೇಕು. ಮುಂದಿನ ವರ್ಷದಿಂದ ಮೈಸೂರಿನಲ್ಲಿ ನರ್ಸಿಂಗ್ ಕಾಲೇಜು ಆರಂಭಿಸುವ ಚಿಂತನೆಯಿದೆ ಎಂದು ಹೇಳಿದರು.ಎಸ್ಎಲ್ ವಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಮಹಾಂತೇಶ್ ಎಂ.ಎಂ, ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಎಸ್.ಬಿ. ನವಾಜ್ ಅಹಮದ್, ಆದ್ಯಾ ಕಾಲೇಜ್ ಆಫ್ ಫಾರ್ಮಸಿ ಪ್ರಾಚಾರ್ಯ ಡಾ. ಪಾಲಾಕ್ಷ ಎಂ.ಎನ್, ಎಸ್ಎಲ್ ವಿ ಪಿಯು ಕಾಲೇಜಿನ ಪ್ರಾಂಶುಪಾಲ ಕೇಶವಮೂರ್ತಿ ಯು., ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‍ನ ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ ಆರ್.ಸಿ, ಈ ಸಂದರ್ಭದಲ್ಲಿ ಹಾಜರಿದ್ದರು.