ಮಿಮ್ಸ್ ಪ್ರಾಧ್ಯಾಪಕರ ವಿರುದ್ಧ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಭಟನೆ

| Published : Apr 24 2025, 12:03 AM IST

ಮಿಮ್ಸ್ ಪ್ರಾಧ್ಯಾಪಕರ ವಿರುದ್ಧ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಿಮ್ಸ್ ಆವರಣದಲ್ಲಿ ವಸತಿ ನಿಲಯ ಇಲ್ಲ. ನಾಲ್ಕೈದು ಕಿ.ಮೀ. ದೂರದಲ್ಲಿರುವ ವಿದ್ಯಾರ್ಥಿ ನಿಲಯಗಳಿಂದ ವಿದ್ಯಾರ್ಥಿಗಳು ತರಗತಿಗೆ ಬರಬೇಕಿತ್ತು. ಯಾವುದೇ ವಾಹನ ಸೌಲಭ್ಯಗಳೂ ಇರುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಲಿಫ್ಟ್‌ನಲ್ಲಿ ಓಡಾಡುತ್ತಿದ್ದ ವಿದ್ಯಾರ್ಥಿಯ ಜಾತಿ ಹೆಸರೇಳಿ ನಿಂದಿಸಿದ ಆರೋಪದ ಮೇಲೆ ಮಿಮ್ಸ್‌ನ ಪ್ರಾಧ್ಯಾಪಕರ ವಿರುದ್ಧ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮಿಮ್ಸ್‌ನ ಬಿಎಸ್ಪಿ ಪ್ರಾಂಶುಪಾಲರ ಕಚೇರಿ ಬಳಿ ಸೇರಿದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪ್ರತಿ ಬಾರಿಯೂ ಇಂತಹುದ್ದೇ ಧೋರಣೆ ಅನುಸರಿಸುತ್ತಾರೆ. ಇದು ಇಂದು ನಿನ್ನೆಯದ್ದಲ್ಲ. ನಾವೂ ಸಾಕಷ್ಟು ಬಾರಿ ಸಹಿಸಿಕೊಂಡಿದ್ದೇವೆ. ಆದರೂ ಪ್ರಾಧ್ಯಾಪಕರ ಧೋರಣೆ ಬದಲಾಗಲಿಲ್ಲ ಎಂದು ಆರೋಪಿಸಿದರು.

ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಿಮ್ಸ್ ಆವರಣದಲ್ಲಿ ವಸತಿ ನಿಲಯ ಇಲ್ಲ. ನಾಲ್ಕೈದು ಕಿ.ಮೀ. ದೂರದಲ್ಲಿರುವ ವಿದ್ಯಾರ್ಥಿ ನಿಲಯಗಳಿಂದ ವಿದ್ಯಾರ್ಥಿಗಳು ತರಗತಿಗೆ ಬರಬೇಕಿತ್ತು. ಯಾವುದೇ ವಾಹನ ಸೌಲಭ್ಯಗಳೂ ಇರುವುದಿಲ್ಲ. ಹೀಗಾಗಿ ಕೆಲವು ಬಾರಿ ತರಗತಿಗೆ ತಡವಾಗಿ ಬಂದ ವಿದ್ಯಾರ್ಥಿಗಳು ಕಾಲೇಜಿನ ನಾಲ್ಕನೇ ಮಹಡಿಯಲ್ಲಿರುವ ತರಗತಿಗೆ ಹೋಗಲು ಅನಿವಾರ್ಯವಾಗಿ ಲಿಫ್ಟ್ ಬಳಕೆ ಮಾಡುತ್ತಿದ್ದರು. ಅದಕ್ಕೂ ಸಹ ಪ್ರಾಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಿ ನಿಂದಿಸುತ್ತಾರೆ. ಇದು ನಮಗೆ ಅತೀವ ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಸ್ಸಿ ನರ್ಸಿಂಗ್ ತರಗತಿಯಲ್ಲಿ ಉಪನ್ಯಾಸ ಮಾಡುವ ಕೆಲವರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆರೋಪಿಸಿದರು.

ಸಿದ್ದರಾಮನಹುಂಡಿಯ ವಿದ್ಯಾರ್ಥಿಯೊಬ್ಬನಿಗೆ ಮೈಕ್ರೋ ಬಯಾಲಜಿ ವಿಭಾಗದ ಪ್ರಾಧ್ಯಾಪಕರು ನಿಂದಿಸಿದರಲ್ಲದೇ, ಪೋಷಕರನ್ನು ಕರೆಸುವಂತೆ ತಾಕೀತು ಮಾಡಿದ್ದರೆನ್ನಲಾಗಿದೆ. ಅಲ್ಲಿಂದ ವಿದ್ಯಾರ್ಥಿಯ ಪೋಷಕರು ಬಂದಿದ್ದನ್ನು ಗಮನಿಸಿದ ಇತರೆ ವಿದ್ಯಾರ್ಥಿಗಳೆಲ್ಲರೂ ಸೇರಿ ಕಾಲೇಜಿನ ಪ್ರಾಂಶುಪಾಲರ ಕೊಠಡಿ ಬಳಿ ಪ್ರತಿಭಟನೆ ನಡೆಸಿದರು.

ಇದರಿಂದ ಗಾಬರಿಗೊಂಡ ಪ್ರಾಂಶುಪಾಲ ಕ್ಯಾನೇಟ್ ಅವರು ವಿದ್ಯಾರ್ಥಿಗಳೊಂದಿಗೆ ಸಂಧಾನ ನಡೆಸಿದರಾದಲೂ ವಿಫಲವಾಯಿತು. ವಿಷಯ ತಿಳಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೂ ಸಹ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ಸಂಬಂಧಿಸಿದ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರಾಂಶುಪಾಲರು ಭರವಸೆ ನೀಡಿದರು. ಆದರೂ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿತ್ತು.

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ-2

ಮಂಡ್ಯ: ಇಂದಿನಿಂದ ಮೇ 5 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ -2 ನಡೆಯಲಿದ್ದು, ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ 5325 ಪುನರಾವರ್ತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ -2 ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾ ಖಜಾನೆ ಯಿಂದ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯಲು ತಹಸೀಲ್ದಾರ್ - ಬಿಇಒ ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಒಟ್ಟು ಆರು ಮಾರ್ಗಗಳ ಮೂಲಕ ಪ್ರಶ್ನ ಪತ್ರಿಕೆಯನ್ನು ಸಾಗಿಸುವುದು. ಪರೀಕ್ಷೆಗಳು ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀ. ಸುತ್ತ ಮುತ್ತಲಿನಲ್ಲಿ ನಿಷೇಧಾಜ್ಞೆ ಜಾರಿ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನಲ್ಲಿ ಯಾವುದೇ ಜೆರಾಕ್ಸ್ ಅಂಗಡಿಗಳು ತೆರೆದಂತೆ ಕ್ರಮ, ವಿದ್ಯಾರ್ಥಿಗಳ ಪರೀಕ್ಷೆ ಹಾಜರಾತಿ ಆನ್ ಲೈನ್ ಲಾಗಿನ್ ಪೋರ್ಟಲ್ ಮೂಲಕ ತೆಗೆದುಕೊಳ್ಳುವುದು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಸ್ತ್ರಾಸ್ತ್ರ ಪೊಲೀಸ್ ರಕ್ಷಣೆ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, , ಸಿಸಿಟಿವಿ ವೆಬ್ ಕಾಸ್ಟಿಂಗ್ ವೀಕ್ಷಿಸಲು ವಿಶೇಷ ತಂಡ ರಚನೆ ಸೇರಿದಂತೆ ಅಗತ್ಯ ಕ್ರಮ ವಹಿಸಲಾಗಿದೆ.