ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಹಾಗೂ ಕೊಡಗು ಜಿಲ್ಲೆ ವತಿಯಿಂದ ಪದ್ಮಶ್ರೀ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರ ಜೊತೆ ‘ಸಾಧಕರೊಂದಿಗೆ ಸಂವಾದ’ ತಿಂಗಳ ಅತಿಥಿ ಕಾರ್ಯಕ್ರಮ ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಹಾಗೂ ಕೊಡಗು ಜಿಲ್ಲೆ ವತಿಯಿಂದ ಪದ್ಮಶ್ರೀ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರ ಜೊತೆ ‘ಸಾಧಕರೊಂದಿಗೆ ಸಂವಾದ’ ತಿಂಗಳ ಅತಿಥಿ ಕಾರ್ಯಕ್ರಮ ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ಗುರುವಾರ ನಡೆಯಿತು. ಪದ್ಮಶ್ರೀ ಪುರಸ್ಕೃತೆ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಲ್ಯ, ಶಿಕ್ಷಣ, ಕಲಾ ಪ್ರದರ್ಶನ, ಹಾಗೆಯೇ ಸರ್ಕಾರದ ಪ್ರೋತ್ಸಾಹ ಹೀಗೆ ತಮ್ಮ ಜೀವನ ಚರಿತ್ರೆ ಬಗ್ಗೆ ವಿವರಿಸಿದರು.ಉಮ್ಮತ್ತಾಟ್ ಮತ್ತು ಕೋಲಾಟ ಪ್ರದರ್ಶನಕ್ಕೆ ಈಗಲೂ ತರಬೇತಿ ನೀಡುತ್ತಾ ಬರಲಾಗಿದೆ. ಆಸಕ್ತರು ಕಲಿಕೆಗೆ ಮುಂದಾಗಬೇಕು. ನಮ್ಮ ಸಂಪ್ರದಾಯ, ಕಲಾ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.
ತನ್ನ ತಂದೆ ವ್ಯಾಪಾರ ಮಾಡುತ್ತಿದ್ದರು. ಕಾಕೋಟುಪರಂಬುನ ತೋಟದಲ್ಲಿ ಜೀವನ ಮಾಡುತ್ತಿದ್ದೆವು. ಅಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದು, ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ನಡೆಯಿತು. ನಂತರ ಪದವಿಗೆ ಬರುವ ಹಂತದಲ್ಲಿ ಮದುವೆ ಮಾಡಲಾಯಿತು. ಆ ಸಂದರ್ಭ ಕೊಡಗಿನ ಸಾಂಪ್ರದಾಯಿಕ ಉಮ್ಮತ್ತಾಟ್ ಕಲಾ ಪ್ರದರ್ಶನವನ್ನು ನೀಡಲಾಗುತ್ತಿದ್ದು, ಇದನ್ನು ಒಂದು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕವಾಗಿ ಮತ್ತಷ್ಟು ಎತ್ತರಕ್ಕೆ ಬೆಳೆಸಲು ಶ್ರಮಿಸಲಾಯಿತು ಎಂದು ರಾಣಿಮಾಚಯ್ಯ ಹೇಳಿದರು.70 ರ ದಶಕದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಬರಲು ಪೋಷಕರು ಬಿಡುತ್ತಿರಲಿಲ್ಲ. ಆದರೂ ಕೊಡಗಿನ ಸಾಂಪ್ರದಾಯಿಕ ಕಲಾ ಪ್ರದರ್ಶನ ಮತ್ತಷ್ಟು ಪಸರಿಸಲು ಶ್ರಮಿಸಲಾಯಿತು. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಅಪಾರವಾಗಿದೆ. ಕಳೆದ 50 ವರ್ಷಗಳಿಂದಲೂ ಉಮ್ಮತ್ತಾಟ್ ಕಲಾ ಪ್ರದರ್ಶನವನ್ನು ದೇಶ-ವಿದೇಶಗಳಲ್ಲಿ ಪ್ರದರ್ಶಿಸುತ್ತಾ ಕೊಡಗಿನ ಸಂಸ್ಕೃತಿ, ಆಚಾರ-ವಿಚಾರ ಮತ್ತು ಪರಂಪರೆಯನ್ನು ತಿಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಇಪ್ಪತ್ತು ದಿನದಲ್ಲಿ ಉಮ್ಮತ್ತಾಟ್ ಮತ್ತು ಕೋಲಾಟ್ ಕಲಾ ಪ್ರದರ್ಶನ ತರಬೇತಿ ನೀಡಲಾಗುವುದು. ಇದುವರೆಗೆ 10 ಸಾವಿರ ಹೆಣ್ಣು ಮಕ್ಕಳಿಗೆ ಉಮ್ಮತ್ತಾಟ್ ಕಲಾ ಪ್ರದರ್ಶನ ಹೇಳಿ ಕೊಡಲಾಗಿದೆ. ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ ಉಮ್ಮತ್ತಾಟ್ ಕಲಾ ಪ್ರದರ್ಶನ ನೀಡಲಾಗಿದೆ ಎಂದು ವಿವರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈಗ ವಿಭಾಗ ಮಟ್ಟದಲ್ಲಿ ಸಾಧಕರೊಂದಿಗಿನ ಸಂವಾದ ಕಾರ್ಯಕ್ರಮ ಆಯೋಜಿಸುತ್ತಾ ಬರಲು ಅವಕಾಶ ಮಾಡಲಾಗಿದೆ. ಆ ನಿಟ್ಟಿನಲ್ಲಿ ವಿಭಾಗ ಮಟ್ಟದಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿದರು. ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿದರು. ಜಯಲಕ್ಷ್ಮಿ ಮತ್ತು ತಂಡದವರು ನಾಡಗೀತೆ ಹಾಡಿದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು.