ನವೆಂಬರ್‌ನಲ್ಲಿ ಅಡಕೆ ಸಮಾವೇಶ: ಎಚ್.ಎಸ್.ಮಂಜಪ್ಪ

| Published : Jun 24 2024, 01:32 AM IST

ಸಾರಾಂಶ

ಸಾಗರದ ಎಪಿಎಂಸಿ ಪ್ರಾಂಗಣದ ಅಡಕೆ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಬೆಳೆಗಾರರ ಸಮಾಲೋಚನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಸಾಗರ

ಅಡಕೆ ಬೆಳೆಗಾರರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಚರ್ಚೆ ಹಾಗೂ ತಾರ್ಕಿಕ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಬರುವ ನವೆಂಬರ್ ತಿಂಗಳಿನಲ್ಲಿ ವಿಶೇಷ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಪಟ್ಟಣದ ಎಪಿಎಂಸಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಸಹಕಾರಿ ಧುರೀಣ ಎಚ್.ಎಸ್.ಮಂಜಪ್ಪ ಮಾತನಾಡಿ, ಸಮಾವೇಶ ವೊಂದು ಸಮರ್ಪಕವಾಗಿ ರೂಪಗೊಳ್ಳಲು ಕನಿಷ್ಠ ೧೫ ಜನರ ತಂಡ ೫ ತಿಂಗಳ ಕಾಲ ಇದಕ್ಕಾಗಿಯೇ ದುಡಿಯಬೇಕಾದ ಅಗತ್ಯವಿದೆ. ಇಂತಹ ಸಕ್ರಿಯ ಕಾರ್ಯಕರ್ತರನ್ನು ಒಳಗೊಂಡು ಕೇವಲ ತಾಂತ್ರಿಕ ಸಮಾವೇಶವಾಗಿಸದೆ ಬೆಳೆಗಾರರ ಸಮಾವೇಶವಾಗಿಸುವ ನಿಟ್ಟಿನಲ್ಲಿ ದುಡಿಯೋಣ ಎಂದರು.

ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಸರಿ ಸುಮಾರು ಎರಡು ದಶಕಗಳ ಹಿಂದಿನ ಗೋರಖ್ಸಿಂಗ್ ವರದಿಯ ಜಾರಿ ಇವತ್ತಿಗೂ ನನೆಗುದಿಗೆ ಬಿದ್ದಿದೆ. ಅದರ ಶಿಫಾರಸ್ಸುಗಳನ್ನು ಸರ್ಕಾರ ಜಾರಿಗೆ ತಂದರೆ ಅಡಕೆ ಬೆಳೆಗಾರರ ಹತ್ತಾರು ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ ಎಂದು ಪ್ರತಿಪಾದಿಸಿದರು.

ಆಪ್ಸ್ಕೋಸ್ ಮಾಜಿ ಅಧ್ಯಕ್ಷ ಆರ್.ಎಸ್.ಗಿರಿ ಮಾತನಾಡಿ, ಸಾಗರ, ಸೊರಬ, ಹೊಸನಗರಗಳ ಅಡಕೆ ಬೆಳೆಗಾರರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಲು, ಬೆಳೆಗಾರರ ಬಲ ಸಂವರ್ಧನೆಗಾಗಿ ಸಮಾವೇಶ ನಡೆಯುವುದು ಅತ್ಯಗತ್ಯ ಎಂದರು. ವಕೀಲ ರವೀಶ್‌ ಕುಮಾರ್, ಸಮಾವೇಶಕ್ಕೆ ಕೇಂದ್ರ ಸಚಿವರನ್ನು ಕರೆಸಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲವೆಂದು ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕೃಷ್ಣಮೂರ್ತಿ ಹೊಸಬಾಳೆ, ಯು.ಹೆಚ್.ರಾಮಪ್ಪ, ಎಸ್.ಟಿ.ಶಿವರಾಮಯ್ಯ, ಮಂಜಪ್ಪ ಹೊಸಬಾಳೆ, ಶ್ರೀನಾಥ್ ಕಾನುಗೋಡು, ಅಶೋಕಭಟ್ ಹುಳೇಗಾರು, ಎಲ್.ಟಿ. ತಿಮ್ಮಪ್ಪ ಹೆಗಡೆ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ತೋಟಗರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ, ಮ್ಯಾಮ್ಕೋಸ್ ನಿರ್ದೇಶಕ ದಿನೇಶ್ ಬರದವಳ್ಳಿ, ಸಹ್ಯಾದ್ರಿ ಕಾಫಿ ಬೋರ್ಡ್ ಅಧ್ಯಕ್ಷ ಶಶಿ ಧರ ಹರತಾಳು, ಆಪ್ಸ್ಕೋಸ್ ನಿರ್ದೇಶಕ ರಮೇಶ್ ಎಂ.ಬಿ., ವರುಣ್ ಎಲ್.ಟಿ., ಈಳಿ ಶ್ರೀಧರ ಇನ್ನಿತರರು ಪಾಲ್ಗೊಂಡಿದ್ದರು.

ಸಮಾವೇಶದ ರೂಪರೇಷೆ ಕುರಿತು ನಿವೃತ್ತ ವಿಜ್ಞಾನಿ ಡಾ.ಬಿ.ವಿ.ನರಹರಿ ಬನದಕೊಪ್ಪ ಮಾಹಿತಿ ನೀಡಿದರು. ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಖಂಡಿಕಾ ಸ್ವಾಗತಿಸಿದರು. ನಾಗಾನಂದ ವಂದಿಸಿದರು.