ದೇಶದ 5ನೇ ಪ್ರಧಾನಮಂತ್ರಿಯಾದ ಚೌಧರಿ ಚರಣಸಿಂಗ್ ರೈತ ವರ್ಗಕ್ಕೆ ಅಪಾರ ಕೊಡುಗೆಗಳನ್ನು ತಮ್ಮ ಜೀವಿತಾವಧಿಯಲ್ಲಿ ನೀಡಿದ್ದರಿಂದ ಅವರ ಸವಿನೆನಪಿಗಾಗಿ ರಾಷ್ಟ್ರೀಯ ರೈತ ದಿನ ಆಚರಿಸುತ್ತಾ ಬರಲಾಗುತ್ತಿದೆ.

ರೋಣ: ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಭೂಮಿಯಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತಿದ್ದು, ಇದರಿಂದಾಗಿ ಉತ್ತಮ ಉಳುಮೆ ಭೂಮಿ ಬರಡು ಭೂಮಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ಕೃಷಿ ಸಂಪನ್ಮೂಲ ವ್ಯಕ್ತಿ ಸುರೇಶಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.ಮಂಗಳವಾರ ತಾಲೂಕಿನ ಅರಹುಣಸಿ ಗ್ರಾಮದ ರೈತ ರಮೇಶ ಕುರಿ ಅವರ ಜಮೀನಿನಲ್ಲಿ ತಾಪಂ, ಕೃಷಿ ಇಲಾಖೆ ವತಿಯಿಂದ ಜರುಗಿದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ 5ನೇ ಪ್ರಧಾನಮಂತ್ರಿಯಾದ ಚೌಧರಿ ಚರಣಸಿಂಗ್ ರೈತ ವರ್ಗಕ್ಕೆ ಅಪಾರ ಕೊಡುಗೆಗಳನ್ನು ತಮ್ಮ ಜೀವಿತಾವಧಿಯಲ್ಲಿ ನೀಡಿದ್ದರಿಂದ ಅವರ ಸವಿನೆನಪಿಗಾಗಿ ರಾಷ್ಟ್ರೀಯ ರೈತ ದಿನ ಆಚರಿಸುತ್ತಾ ಬರಲಾಗುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಭಾರತದ ಕೃಷಿ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೈಬ್ರಿಡ್ ತಳಿಗಳ ಬಳಕೆಯಿಂದಾಗಿ ದೇಶದ ರೈತರಲ್ಲಿ ದೈಹಿಕ ಸಾಮರ್ಥ್ಯ ಕಡಿಮೆಯಾಗುತ್ತಿದೆ. ವಿಶ್ವಸಂಸ್ಥೆ ಭಾರತದಲ್ಲಿ ಮಹಿಳೆಯರು, ಮಕ್ಕಳು ಮತ್ತು ವಯಸ್ಕ ಪುರುಷರಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಸಾವಯವ ಕೃಷಿಯೊಂದೇ ಪರಿಹಾರವಾಗಿದ್ದು, ರೈತರು ಯೋಚಿಸಬೇಕಿದೆ ಎಂದರು.ರೋಣ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಅರಹುಣಸಿ ಮಾತನಾಡಿ, ಭಾರತೀಯ ಕೃಷಿ ಪರಂಪರೆ ಮೊದಲಿನಿಂದಲೂ ಶ್ರೀಮಂತಿಕೆಯಿಂದ ಕೂಡಿದ್ದು, ಹಸಿರುಕ್ರಾಂತಿಯ ನಂತರ ಭಾರತೀಯ ಕೃಷಿ ಪದ್ಧತಿ ದಾರಿ ತಪ್ಪಿದ್ದು, ಅತಿಯಾದ ರಾಸಾಯನಿಕಗಳ ಅವಲಂಬನೆ ಉಳುಮೆ ಭೂಮಿಯ ಫಲವತ್ತತೆ ಕಳೆಯುವ ಜತೆಗೆ ಯಾಂತ್ರೀಕೃತ ಕೃಷಿ ಅಳವಡಿಕೆ ಒಂದಾಗಿ ರೈತರ ಉತ್ಪಾದನ ವೆಚ್ಚ ಹೆಚ್ಚಾಗಿದ್ದು, ಸಾಲದ ಸುಳಿಗೆ ಸಿಲುಕುವಂತಾಗಿದೆ ಎಂದರು.

ಸಾನ್ನಿಧ್ಯವನ್ನು ಅಬ್ಬಿಗೇರಿ ಬಸವರಾಜ ದೇವರು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಮುತ್ತಣ್ಣ ಚೌಡರಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಡಿಯಪ್ಪ ಪೂಜಾರ, ಶರಣಯ್ಯ ಮಾಸ್ತಿಗಟ್ಟಿ, ಹನುಮಂತಪ್ಪ ಪಟ್ಟೇದ, ಶಂಕರ ಕಳಿಗಣ್ಣವರ, ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ತಹಶೀಲ್ದಾರ, ಕಸ್ತೂರೆವ್ವ ನರೇಗಲ್ಲ, ಅಕ್ಕಮಹಾದೇವಿ ಪಾಟೀಲ, ರಮೇಶ ಕುರಿ, ರವಿ ಬೆಲ್ಲಪ್ಪನವರ, ಶರಣಪ್ಪ ಧರಣೆಪ್ಪನವರ, ಹನುಮಂತಪ್ಪ ಪಟ್ಟೇದ, ಬಸವರಾಜ ಕೊಟುಮಚಗಿ, ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ಮೇಘರಾಜ ಬಾವಿ, ಮಹಾಂತೇಶ ಪೂಜಾರ, ಸಂಗಪ್ಪ ದಂಡಿನ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಶಿವಪುತ್ರಪ್ಪ ದೊಡ್ಡಮನಿ ಸ್ವಾಗತಿಸಿ, ನಿರೂಪಿಸಿದರು.