ನ್ಯಾನೋ ಗೊಬ್ಬರ ಬಳಕೆಯಿಂದ ಪೋಷಕಾಂಶದ ಸದ್ಬಳಕೆ

| Published : Jul 24 2025, 01:45 AM IST

ಸಾರಾಂಶ

ನ್ಯಾನೊ ಗೊಬ್ಬರವನ್ನು ಎಲೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಪೋಷಕಾಂಶದ ಸದ್ಬಳಕೆಯಾಗಲಿದೆ. ಸಾಮಾನ್ಯ ರಸಗೊಬ್ಬರ ಬಳಕೆಯಿಂದ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಲು ಅನುಕೂಲವಾಗಲಿದೆ.

ಕುಕನೂರು:

ನ್ಯಾನೊ ಗೊಬ್ಬರವನ್ನು ಎಲೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಪೋಷಕಾಂಶದ ಸದ್ಬಳಕೆಯಾಗಲಿದೆ. ಸಾಮಾನ್ಯ ರಸಗೊಬ್ಬರ ಬಳಕೆಯಿಂದ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಲು ಅನುಕೂಲವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ. ರುದ್ರೇಶಪ್ಪ ಹೇಳಿದರು.

ಕೃಷಿ ಇಲಾಖೆ, ಪ್ರಾಥಮಿಕ ಸಹಕಾರ ಸಂಘ ಮತ್ತು ಇಫ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ ತಾಲೂಕಿನ ಮಂಗಳೂರ ಗ್ರಾಮದ ಶರಣಪ್ಪ ಗಾಣಿಗೇರ ಜಮೀನಿನಲ್ಲಿ ಕೃಷಿ ಇಲಾಖೆಯ ಡ್ರೋನ್‌ ಮೂಲಕ ಗೋವಿನ ಜೋಳದ ಬೆಳೆಗೆ ನ್ಯಾನೊ ಯೂರಿಯೂ ಮತ್ತು ನ್ಯಾನೊ ಡಿಎಪಿ ಸಿಂಪರಣಾ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾನೋ ಗೊಬ್ಬರದ ಬಳಕೆಗೆ ರೈತರು ಮುಂದಾಗಬೇಕು. ಭೂಮಿಯ ಫಲವತ್ತತೆ ಕಾಪಾಡಲು ನ್ಯಾನೋ ಬಳಕೆ ಸಹಾಯಕ ಆಗುತ್ತದೆ ಎಂದರು.

ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ನ್ಯಾನೊ ಯೂರಿಯಾ ಶೇ. 20ರಷ್ಟು ಹಾಗೂ ನ್ಯಾನೊ ಡಿಎಪಿ ಶೇ. 8ರಷ್ಟು ಸಾರಜನಕ ಮತ್ತು ಶೇ. 16ರಷ್ಟು ರಂಜಕ ಹೊಂದಿದೆ. ಹೀಗಾಗಿ ಬೆಳೆಗಳ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಪೋಷಕಾಂಶ ಒದಗಿಸಿ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಡ್ರೋನ್​ ಮೂಲಕ ಸಿಂಪಡಿಸಿದರೆ ಶೇ. 80ರಷ್ಟು ಬೆಳೆಗಳಿಗೆ ತಲುಪಲಿದ್ದು, ಕಡಿಮೆ ಖರ್ಚು, ಕಡಿಮೆ ಶ್ರಮದ ಮೂಲಕ ಹೆಚ್ಚು ಬೆಳೆಗಳಿಗೆ ತಲುಪಲಿದೆ. ಡ್ರೋಣ್‌ ಮೂಲಕ 10 ನಿಮಿಷದಲ್ಲಿ ಒಂದು ಎಕರೆಗೆ ಕೇವಲ ₹ 400 ಸಿಂಪಡಣೆ ಮಾಡಬಹುದು ಎಂದರು.

ಕೃಷಿ ಅಧಿಕಾರಿ ನಿಂಗಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶರಣಪ್ಪ ಹ್ಯಾಟಿ, ಕಾರ್ಯದರ್ಶಿ ಹನಮಗೌಡ ಈಳಿಗೇರ, ನಿರ್ದೇಶಕ ಶಂಕ್ರಪ್ಪ ಉಳ್ಳಾಗಡ್ಡಿ, ಇಫ್ಕೋ ಕಂಪನಿಯ ರಾಘವೇಂದ್ರ, ರುದ್ರಗೌಡ ಪಾಟೀಲ್, ಶರಣಪ್ಪ ಬಳಿಗಾರ ಇದ್ದರು.