ಪೋಷಣ ಅಭಿಯಾನ ಮಕ್ಕಳ ಆರೋಗ್ಯದ ಭವಿಷ್ಯ ರೂಪಿಸುವ ಶಕ್ತಿಯುತ ಹಾದಿ

| Published : Sep 24 2025, 01:00 AM IST

ಪೋಷಣ ಅಭಿಯಾನ ಮಕ್ಕಳ ಆರೋಗ್ಯದ ಭವಿಷ್ಯ ರೂಪಿಸುವ ಶಕ್ತಿಯುತ ಹಾದಿ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಣ ಅಭಿಯಾನವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ಶೇ.100ರಷ್ಟು ಮಕ್ಕಳಿಗೂ ತಾಯಿ ಹಾಲು. ಶೇ.100 ಗರ್ಭಿಣಿಯರಿಗೂ ಪೌಷ್ಟಿಕಾಹಾರ ದೊರಕಬೇಕು ಮತ್ತು ಎಲ್ಲರಲ್ಲಿಯೂ ಇದರ ಮಹತ್ಮದ ಅರಿವು ಮೂಡಿಸಬೇಕು.

ಧಾರವಾಡ:

ಪೋಷಣ ಅಭಿಯಾನವು ಮಕ್ಕಳ ಭವಿಷ್ಯ ಬದಲಾಯಿಸುವ ಶಕ್ತಿಯುತ ಕಾರ್ಯಕ್ರಮ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಒಟ್ಟಾಗಿ ಪೋಷಣ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಜಿಲ್ಲಾಮಟ್ಟದ 8ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ ಉದ್ಘಾಟಿಸಿದ ಅವರು, ವಿಶೇಷವಾಗಿ ಮಕ್ಕಳಿಗೆ ಆದಷ್ಟು ಸಕ್ಕರೆ ಆಹಾರ ಕಡಿಮೆ ಕೊಡಬೇಕು. ಶಿಶುವಿಗೆ ಮೊದಲ ಆರು ತಿಂಗಳು ತಾಯಿ ಹಾಲೇ ಶ್ರೇಷ್ಠ ಆಹಾರ. ಆ ನಂತರ ದ್ರವ ರೂಪದ ಪೌಷ್ಟಿಕ ಆಹಾರ ನೀಡಿದರೆ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ. ಹಸಿರು ಸೊಪ್ಪು, ಸಿರಿಧಾನ್ಯ, ಹಣ್ಣುಗಳು ಮನೆಗಳಲ್ಲಿ ದೊರೆಯುವ ಸರಳ ಪೋಷಕ ಆಹಾರವಾಗಿವೆ ಎಂದರು.

ಪೋಷಣ ಅಭಿಯಾನವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ಶೇ.100ರಷ್ಟು ಮಕ್ಕಳಿಗೂ ತಾಯಿ ಹಾಲು. ಶೇ.100 ಗರ್ಭಿಣಿಯರಿಗೂ ಪೌಷ್ಟಿಕಾಹಾರ ದೊರಕಬೇಕು ಮತ್ತು ಎಲ್ಲರಲ್ಲಿಯೂ ಇದರ ಮಹತ್ಮದ ಅರಿವು ಮೂಡಿಸಬೇಕು ಎಂದ ಅವರು, ಸಹಜ, ಪ್ರಕೃತಿಯ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಆಧಾರ. ಇಂದಿನ ಮಕ್ಕಳಿಗೆ ಸಿರಿಧಾನ್ಯಗಳ ಮಹತ್ವವೇ ತಿಳಿದಿಲ್ಲ. ಸಿರಿಧಾನ್ಯಗಳಲ್ಲಿ ಇರುವ ಪೌಷ್ಟಿಕಾಂಶ, ಶಕ್ತಿಯುತ ಗುಣಗಳನ್ನು ಅವರಿಗೆ ತಿಳಿಸಿಕೊಡುವುದು ನಮ್ಮ ಜವಾಬ್ದಾರಿ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಮಾತನಾಡಿ, ಪೋಷಣೆಯ ಕೊರತೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು, ಶಿಶುಗಳು ಹಾಗೂ ಕುಮಾರಾಸ್ಥೆಯಲ್ಲಿರುವ ಮಕ್ಕಳಿಗೆ ಸಮತೋಲನ ಆಹಾರ, ಪೋಷಕಾಂಶಯುತ ಆಹಾರವು ಅವಶ್ಯವಾಗಿದೆ ಎಂದು ಹೇಳಿದರು. ಪ್ರತಿ ಕುಟುಂಬದಲ್ಲಿ ದಿನನಿತ್ಯವೂ ಪೋಷಣದ ಪ್ರಗತಿ ನಡೆಯಬೇಕು. ಹಿರಿಯರೆಲ್ಲರೂ ಆರೋಗ್ಯದಿಂದ ಇದ್ದದ್ದು, ಅವರು ಸೇವಿಸಿದ ಆಹಾರದಿಂದ ಮತ್ತು ಆಹಾರ ಸೇವನೆ ಕ್ರಮ ಸರಳವಾಗಿದ್ದು, ಕಾಲಮಾನಕ್ಕೆ ತಕ್ಕಂತೆ ಆಹಾರ ಸೇವಿಸುತ್ತಿದ್ದರು. ಆದ್ದರಿಂದ ಮಕ್ಕಳಿಗೂ ಸಮಯೋಚಿತ, ಸರಿಯಾದ ಆಹಾರ ಪದ್ಧತಿ ಬೆಳೆಸುವುದು ಅತ್ಯಂತ ಅವಶ್ಯಕ ಎಂದರು.

ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಸ್ವಾಗತಿಸಿದರು. ಸುನಿತಾ ನಾಡಿಗೇರ ನಿರೂಪಿಸಿದರು. ಡಾ. ಕಮಲಾ ಬೈಲೂರ, ವಿಜಯಲಕ್ಷ್ಮೀ ಪಾಟೀಲ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು, ಸಿಬ್ಬಂದಿ ಹಾಗೂ ಗರ್ಭಿಣಿ ಮಹಿಳೆಯರಿದ್ದರು.