ಸಾರಾಂಶ
ಕುಷ್ಟಗಿ:
ಪೌಷ್ಟಿಕ ಅಭಿಯಾನ ಕೇವಲ ಅಂಗನವಾಡಿ ಕೇಂದ್ರಗಳಿಗೆ ಸೀಮಿತವಾಗದೆ ಮನೆ-ಮನೆಗೆ ವಿಸ್ತರಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಕರೆ ನೀಡಿದರು.ತಾಲೂಕಿನ ದೋಟಿಹಾಳದ ದೇವಲ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹದ ಅಂಗವಾಗಿ ಕಾನೂನು ಅರಿವು ನೆರವು ಹಾಗೂ 8ನೇ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ಪೋಷಣಾ ಅಭಿಯಾನದ ಕುರಿತು ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಂತೆ ತಿಳಿಸಬೇಕು. ಅಂದಾಗ ಮಾತ್ರ ಸುಭದ್ರ ದೇಶ ನಿರ್ಮಾಣವಾಗಲಿದೆ ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಮಾತನಾಡಿ, ಗರ್ಭಿಣಿಯರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಪೋಷಕಾಂಶಗಳುಳ್ಳ ಆಹಾರ ಸೇವಿಸಬೇಕು ಎಂದ ಅವರು, ಮಕ್ಕಳಿಗೆ ತಾತ್ವಿಕ ಯೋಚನೆ ಮೂಡಿಸಬೇಕು. ಇಂದು ಇವುಗಳ ಕೊರತೆಯಿಂದ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ ಮಾತನಾಡಿ, ಪಾಲಕರು ಖಾಸಗಿ ಶಾಲೆಗೆ ಮಕ್ಕಳ ಸೇರಿಸದೆ ಅಂಗನವಾಡಿ ಕೇಂದ್ರಕ್ಕೆ ಸೇರಿಸಿದರೆ ಉತ್ತಮ ಶಿಕ್ಷಣದ ಜತೆಗೆ ಪೌಷ್ಟಿಕಾಂಶಯುಕ್ತ ಆಹಾರ ಸಿಗಲಿದೆ ಎಂದು ಹೇಳಿದರು.ಇದೇ ವೇಳೆ ವಿವಿಧ ಖಾದ್ಯಗಳ ಪ್ರದರ್ಶನವನ್ನು ನ್ಯಾಯಾಧೀಶರು ಹಾಗೂ ಅಧಿಕಾರಿಗಳು ವೀಕ್ಷಿಸಿದರು. ಮಕ್ಕಳಿಗೆ ಅನ್ನಪ್ರಾಷಾ, ಗರ್ಭೀಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು. ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಎಸ್. ಪಾಟೀಲ, ಮಾತನಾಡಿದರು. ಭಾಗ್ಯಶ್ರೀ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು, ದೋಟಿಹಾಳ ವಲಯದ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ನಿರೂಪಿಸಿದರು, ಸಿಡಿಪಿಒ ಯಲ್ಲಮ್ಮ ಹಂಡಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್, ಅಪರ ಸರ್ಕಾರಿ ವಕೀಲರಾದ ಪರಸಪ್ಪ ಗುಜಮಾಗಡಿ, ಸಂಗನಗೌಡ ಪಾಟೀಲ, ಡಾ. ಆನಂದ, ರವೀಂದ್ರ ನಂದಿಹಾಳ, ಶ್ರೀನಿವಾಸ ಕಂಟ್ಲಿ, ಬಸವರಾಜ ಚೋಕಾವಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸಿಡಿಪಿಒ ಕಾರ್ಯಾಲಯದ ಸಿಬ್ಬಂದಿ ಇದ್ದರು.