ಇಂಡಿ: ತಾಯಿ ಹಾಗೂ ಮಗು ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರ ಸೇವನೆ ಅತ್ಯಂತ ಮುಖ್ಯವಾಗಿದ್ದು, ಪ್ರತಿ ಕುಟುಂಬವೂ ಪೌಷ್ಟಿಕ ಆಹಾರದ ಮಹತ್ವ ಅರಿತುಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ತಾಯಿ ಹಾಗೂ ಮಗು ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರ ಸೇವನೆ ಅತ್ಯಂತ ಮುಖ್ಯವಾಗಿದ್ದು, ಪ್ರತಿ ಕುಟುಂಬವೂ ಪೌಷ್ಟಿಕ ಆಹಾರದ ಮಹತ್ವ ಅರಿತುಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರ ಹೇಳಿದರು.

ತಾಲೂಕಿನ ಅಗರಖೇಡ ಬಿ ವಲಯದ ಲಾಳಸಂಗಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರತಿವರ್ಷ ಪೋಷಣ ಮಾಸಾಚರಣೆ ಆಚರಿಸಲಾಗುತ್ತಿದ್ದು, ತಾಯಿ–ಮಗು ಆರೋಗ್ಯ, ಪೌಷ್ಟಿಕ ಆಹಾರ ಸೇವನೆ ಹಾಗೂ ಅಪೌಷ್ಟಿಕತೆ ನಿರ್ಮೂಲನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಇದೇ ವೇಳೆ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಸೇರಿದಂತೆ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, ಅರ್ಹ ಫಲಾನುಭವಿಗಳು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇಷ್ಮಾ ಚವ್ಹಾಣ ಅವರು ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಬಾಲವಿವಾಹ ತಡೆಗಟ್ಟುವಲ್ಲಿ ಸಾರ್ವಜನಿಕರ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸಿದರು.

ಬಾಲ್ಯವಿವಾಹ ತಡೆಗಟ್ಟಿ ಮಕ್ಕಳಿಗೆ ಶಿಕ್ಷಣ ಹಾಗೂ ಉತ್ತಮ ಭವಿಷ್ಯ ಕಲ್ಪಿಸಲು ಸಮಾಜದ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ ರಾಥೋಡ, ನಿವೃತ್ತ ಶಿಕ್ಷಕ ವಿ.ಬಿ. ಬೊಗೊಂಡೆ ಹಾಗೂ ಶಿಕ್ಷಕ ಆರ್.ಬಿ. ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಸಾವಿತ್ರಿ ವಾಲೀಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲೂಕು ಪೋಷಣಾ ಅಭಿಯಾನದ ಸಂಯೋಜಕಿ ಕುಮಾರಿ ಸನಾ ಶೇಖ್,ವಲಯ ಮೇಲ್ವಿಚಾರಕಿ ಸಾವಿತ್ರಿ ಮಣ್ಣೂರ , ಮೇಲ್ವಿಚಾರಕಿಯರಾದ ಸುಲೋಚನಾ ಮಾದರ, ಲಲಿತಾ ಮಾದರ ಹಾಗೂ ಕವಿತಾ ಪಾಟೀಲ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಯಂದಿರು ಮಗುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿ‌ಹಿನಿ ಮಹತ್ವ ಅರಿತುಕೊಂಡು, ಶಿಶುವಿಗೆ ಅಗತ್ಯವಿರುವ ಅವಧಿಯಲ್ಲಿ ತಾಯಿಯ ಎದೆಹಾಲು ನೀಡಬೇಕು. ತಾಯಿ ಮತ್ತು ಮಗುವಿನ ಆರೋಗ್ಯದ ಕುರಿತು ಕುಟುಂಬಗಳು ಹೆಚ್ಚಿನ ಕಾಳಜಿ ವಹಿಸುವುದರ ಜತೆಗೆ, ಆರೋಗ್ಯ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಇಲಾಖೆಯ ಸಲಹೆಗಳನ್ನು ಪಾಲಿಸಬೇಕು.

- ಬಸವರಾಜ ಜಿಗಳೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿ