ಸರ್ವಾಂಗೀಣ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮುಖ್ಯ: ಮಹಾಂತೇಶ ದರಗದ

| Published : Oct 14 2025, 01:02 AM IST

ಸಾರಾಂಶ

ಕೊಪ್ಪಳ ಯೋಜನೆಯ ಭಾಗ್ಯನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ 8ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಸೋಮವಾರ ಸಮಾರೋಪ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಡೆಯಿತು.

ಕೊಪ್ಪಳ: ಪೌಷ್ಟಿಕ ಆಹಾರವನ್ನು ಕ್ರಮಬದ್ಧವಾಗಿ ಸೇವನೆ ಮಾಡಬೇಕು. ದೇಹದ ಸರ್ವಾಂಗೀಣ ಅಭಿವೃದ್ಧಿಗೆ ಪೌಷ್ಟಿಕ ಆಹಾರ ಸೇವನೆ ತುಂಬಾ ಮುಖ್ಯ. ಆಹಾರದಲ್ಲಿ ವೈವಿಧ್ಯತೆ ಕಂಡುಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಸೋಮವಾರ ಕೊಪ್ಪಳ ಯೋಜನೆಯ ಭಾಗ್ಯನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ 8ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರೋಪ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೋಟಗಾರ ಮಾತನಾಡಿ, ಪೌಷ್ಟಿಕ ಆಹಾರ ಹಾಗೂ ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು ಎಲ್ಲ ಗರ್ಭಿಣಿ, ಬಾಣಂತಿಯರು ಆರೋಗ್ಯಕರ ಮಗುವಿಗೆ ಜನ್ಮ ನೀಡುವ ನಿಟ್ಟಿನಲ್ಲಿ ವಹಿಸಬೇಕಾದ ಕ್ರಮಗಳನ್ನು ತಿಳಿಸಿದರು. ಅಂಗನವಾಡಿ ಕೇಂದ್ರದಲ್ಲಿ ಪಡೆಯುವ ಎಲ್ಲ ಪೌಷ್ಟಿಕ ಆಹಾರಗಳ ಸದುಪಯೋಗದ ಬಗ್ಗೆ ತಿಳಿಸಿದರು. ಹೆಣ್ಣನ್ನು ಓದಿಸಿ, ಬೆಳೆಸಿ ಎಂದು ಹೇಳಿದರು.

ಪಪಂ ಉಪಾಧ್ಯಕ್ಷ ಹೊನ್ನೂರುಸಾಬ ಭೈರಾಪುರ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರು ಸದೃಢವಾಗಿ ಮತ್ತು ಆರೋಗ್ಯವಾಗಿದ್ದರೆ ದೇಶದ ನಿರ್ಮಾಣ ಮಾಡಬಹುದು. ಜಂಕ್‌ಫುಡ್ ನಿರಾಕರಣೆ ಮಾಡಬೇಕು ಎಂದು ಹೇಳಿದರು.

ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ಭಾಗ್ಯನಗರ ಪಪಂ ಮುಖ್ಯಾಧಿಕಾರಿ ಸುರೇಶ ಬಬಲಾದ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಗದ್ದಿ ಮತ್ತು ರೂಪ ಗಂಧದ, ಭಾಗ್ಯನಗರ ವಲಯದ ಮೇಲ್ವಿಚಾರಕಿ ರೋಜಾ ಎಲ್.ಎಚ್.ವಿ. ಭಾಗವಹಿಸಿದ್ದರು. ಸೀಮಂತ, ಅನ್ನಪ್ರಾಶನ ಕಾರ್ಯಕ್ರಮ ಹಾಗೂ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.