ಸಾರಾಂಶ
ಪ್ರತಿಯೊಬ್ಬರು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಲು ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಿ. ಪ್ರಸನ್ನ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಪ್ರತಿಯೊಬ್ಬರು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಲು ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಿ. ಪ್ರಸನ್ನ ಕುಮಾರ್ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಆಯೋಜಿಸಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.2013-14ರಲ್ಲಿ ಸರ್ಕಾರವು ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಮಹಿಳೆಯರು, ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯವನ್ನು ರಕ್ಷಿಸುವುದರಿಂದ ಉತ್ತಮ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.ರಕ್ತಹೀನತೆ ಹಾಗೂ ಹಿಮೋಗ್ಲೊಬಿನ್ ಪ್ರಮಾಣ ಕಡಿಮೆ ಇರುವ ಆರೋಗ್ಯ ಸಮಸ್ಯೆಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಇಂತಹ ಸಮಸ್ಯೆಗಳಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಚಿಕಿತ್ಸೆ ಪಡೆಯುವ ಬದಲು ಇಂತಹ ಸಮಸ್ಯೆಗಳು ಬರದಂತೆ ಉತ್ತಮವಾದ ಕಬ್ಬಿಣದ ಆಂಶವಿರುವ ಆಹಾರ ಸೇವನೆ ಮಾಡಬೇಕು. ಅಂಗನವಾಡಿ ಕೇಂದ್ರಗಳು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.ಅಂಗನವಾಡಿ ಕಾರ್ಯಕರ್ತರು ಜನರ ಆರೋಗ್ಯ ರಕ್ಷಣೆಯ ಜತೆಗೆ ತಮ್ಮ ಅರೋಗ್ಯ ರಕ್ಷಿಸಲು ಹೆಚ್ಚಿನ ಕಾಳಜಿ ವಹಿಸಬೇಕು. ತಾವು ಆರೋಗ್ಯವಾಗಿದ್ದು ಬೇರೆಯವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಬಾಯಿ ರುಚಿಗೆ ಒಳಗಾಗುವ ಮಕ್ಕಳು ಜಂಕ್ ಪುಡ್ ಬಯಸುತ್ತಾರೆ. ಪಾಲಕರು ಈ ಕುರಿತು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಎಚ್.ಬಿ. ರವಿಕುಮಾರ್ ಮಾತನಾಡಿ ಆರೋಗ್ಯವಂತ ಪ್ರಜೆ ದೇಶದ ಆಸ್ತಿಯಾಗಲು ಸಾಧ್ಯ ಎನ್ನುವ ಸತ್ಯವನ್ನು ಅರಿತುಕೊಂಡು ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಯ ಕುರಿತು ಜಾಗೃತಿವಹಿಸಬೇಕು. ಮನೆಯ ಸಂಪೂರ್ಣ ನಿರ್ವಹಣೆಯ ಹೊಣೆ ಹೊತ್ತಿರುವ ಮಹಿಳೆಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದರೆ ಕುಟುಂಬದಲ್ಲಿ ನೆಮ್ಮದಿ, ಸಂತೋಷ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು..ಕಾರ್ಯಕ್ರಮದಲ್ಲಿ ತಾ.ಪಂ ಇ.ಓ ಸುನೀಲ್ ಕುಮಾರ್, ವಕೀಲರಾದ ಬಸವಲಿಂಗಪ್ಪ, ಜಗದೀಶ್ ನಾಯ್ಕ, ಇ.ಟಿ. ರಮೇಶ್, ಶಶಿಕಲಾ, ನವೀನ್ ಕುಮಾರ್ ಮತ್ತಿತರಿದ್ದರು.