ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಅಡಿಕೆಗೆ ಉತ್ತಮ ಧಾರಣೆ: ಮಾಜಿ ಸಚಿವ ಡಿ.ಎನ್‌.ಜೀವರಾಜ್

| Published : Apr 22 2024, 02:01 AM IST

ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಅಡಿಕೆಗೆ ಉತ್ತಮ ಧಾರಣೆ: ಮಾಜಿ ಸಚಿವ ಡಿ.ಎನ್‌.ಜೀವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

2013 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿತ್ತು. ಜಯಪ್ರಕಾಶ ಹೆಗ್ಡೆ ಲೋಕ ಸಭಾ ಸದಸ್ಯರಾಗಿದ್ದರು. ಆಗ ಕಾಂಗ್ರೆಸ್ ಪಕ್ಷದ ಇಂದಿರಾ, ಜೈಸಿಂಗ್‌ ಅ‍ವರು ಅಡಿಕೆ ಕ್ಯಾನ್ಸರ್ ಕಾರಕವಾಗಿದ್ದು ಅದನ್ನು ಬ್ಯಾನ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು ಎಂದು ಜೀವರಾಜ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಅಡಿಕೆಗೆ ಉತ್ತಮ ಧಾರಣೆ ಬಂದಿದ್ದು ಈಗಲೂ ಆ ಉತ್ತಮ ಧಾರಣೆ ಮಂದುವರಿದಿದೆ ಎಂದು ಮಾಜಿ ಸಚಿವ ಡಿ.ಎನ್‌.ಜೀವರಾಜ್ ತಿಳಿಸಿದರು.

ಅವರು ಭಾನುವಾರ ಬಾ‍ಳೆ ಗ್ರಾಮ ಪಂಚಾಯಿತಿ ಮೂಡಬಾಗಿಲಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ ಹೆಗಡೆ ಅಡಿಕೆ ಧಾರಣೆ ಏರಿಕೆಯಾಗಲು ನಾನೇ ಕಾರಣ ಎನ್ನುತ್ತಿದ್ದಾರೆ. ಆದರೆ, 2013 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿತ್ತು. ಜಯಪ್ರಕಾಶ ಹೆಗ್ಡೆ ಲೋಕ ಸಭಾ ಸದಸ್ಯರಾಗಿದ್ದರು. ಆಗ ಕಾಂಗ್ರೆಸ್ ಪಕ್ಷದ ಇಂದಿರಾ, ಜೈಸಿಂಗ್‌ ಅ‍ವರು ಅಡಿಕೆ ಕ್ಯಾನ್ಸರ್ ಕಾರಕವಾಗಿದ್ದು ಅದನ್ನು ಬ್ಯಾನ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು.

ಆ ಕೇಸ್‌ ಇನ್ನೂ ಜೀವಂತವಾಗಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಸದರಾಗಿದ್ದರು. ಆಗ ವಿದೇಶದಿಂದ ಆಮದಾಗುತ್ತಿರುವ ಅಡಿಕೆಗೆ ತೆರಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕೇಂದ್ರದಲ್ಲಿ ಸಚಿವರಾಗಿದ್ದ ಅನಂತಕುಮಾರ್‌ ನೇತ್ರತ್ವದಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಆಗ್ರಹಿಸಿದೆವು.

ಆಮದು ಆಗುತ್ತಿರುವ ಅಡಿಕೆ ಹೆಚ್ಚುವರಿ ತೆರಿಗೆ ವಿಧಿಸಿದ ಪರಿಣಾಮ 2014ರ ಅಕ್ಟೋಬರ್ ತಿಂಗಳಲ್ಲಿ 1 ಕ್ವಿಂಟಲ್‌ಗೆ 80 ಸಾವಿರ ಮುಟ್ಟಿತ್ತು. ಈಗಲೂ ಅಡಿಕೆ ಧಾರಣೆ ಸ್ಥಿರವಾಗಿಯೇ ಮುಂದುವರಿದಿದೆ. ಅಡಿಕೆ ಧಾರಣೆ ಏರಿಕೆಗೂ ಜಯಪ್ರಕಾಶ ಹೆಗ್ಡೆಗೂ ಸಂಬಂಧವಿಲ್ಲ ಎಂದರು.

ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ನಾನು ಸೋತರೂ ಅದು ಸೋಲಲ್ಲ. ರಾಜೇಗೌಡರು ಗೆದ್ದರೂ ಅವರ ಗೆಲುವಲ್ಲ. ನನಗೆ ಅದೃಷ್ಟದ ಕೊರತೆ ಇತ್ತು. ಕೆಲವೇ ಮತಗಳ ಅಂತರದಿಂದ ಸೋತಿದ್ದೇನೆ. ಆದರೂ ನನಗೆ ಜನರು ಮತ ನೀಡಿದ್ದಾರೆ. ಈ ಚುನಾವಣೆಯು ದೇಶದ ಚುನಾವಣೆಯಾಗಿದ್ದು, ದೇಶ ಉಳಿದರೆ ನಾವು ಉಳಿಯುತ್ತೇವೆ. ದೇಶಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕಾಗಿದೆ. ಅವರು ಪ್ರಧಾನಿಯಾಗಬೇಕಾದರೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲ್ಲಬೇಕಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರು ಮೊದಲು ಜೆಡಿಎಸ್‌ ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿ ನಂತರ ಬಿಜೆಪಿಗೆ ಬಂದು ಈಗ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದಾರೆ. ಎಲ್ಲಾ ಪಕ್ಷದಲ್ಲೂ ಅಧಿಕಾರ ಅನುಭವಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದಿದೆ. 135 ಸ್ಥಾನ ಗೆದ್ದಿದ್ದೀರಿ ? 11 ತಿಂಗಳ ನಿಮ್ಮ ಸಾಧನೆ ಏನು? ಎಂದು ಜನರ ಮುಂದೆ ಉತ್ತರಿಸಬೇಕು. ನಾನು ಶಾಸಕನಾಗಿದ್ದಾಗ ಫಾರಂ ನಂ 50,53 ರಲ್ಲಿ ಸಾಗುವಳಿ ಚೀಟಿ, ಬಡವರಿಗೆ ಗಂಗಾ ಕಲ್ಯಾಣ, 94 ಸಿಸಿ ಯಡಿ ಹಕ್ಕು ಪತ್ರ ನೀಡಿದ್ದೆ. ನೀವು ಎಷ್ಟು ಹಕ್ಕು ಪತ್ರ ನೀಡಿದ್ದೀರಿ ? ಎಂದು ಉ್ತತ್ತರಿಸಬೇಕು ಎಂದು ಆಗ್ರಹಿಸಿದರು. ಗ್ಯಾರಂಟಿ ಹೆಸರಿನಲ್ಲಿ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಜಾಸ್ತಿಯಾಗಿದೆ. ಪ್ರಪಂಚದಲ್ಲೇ ಭಾರತ ದೇಶ ಮಾತ್ರ ಕೊರೋನ ಸಮಯದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಿತ್ತು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿ ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ಜನರ ಶಾಶ್ವತ ಗ್ಯಾರಂಟಿಗಾಗಿ, ದೇಶದ ಭದ್ರತೆಗಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ. ರೈತರಿಗಾಗಿ, ಕೂಲಿ ಕಾರ್ಮಿಕರ ಅಭಿವೃದ್ಧಿಗೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕಾಗಿದೆ ಎಂದರು.

ಸಭೆಯಲ್ಲಿ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾಮ ನಾಗೇಶ್, ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ರಶ್ಮಿ ದಯಾನಂದ್, ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್ ಮಾತನಾಡಿದರು. ಸಭೆ ಅಧ್ಯಕ್ಷತೆಯನ್ನು ಬಿಜೆಪಿ ಕಸಬಾ ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್‌ ವಹಿಸಿದ್ದರು. ಸಭೆಯಲ್ಲಿ ಬೂತ್‌ ಸಮಿತಿ ಅಧ್ಯಕ್ಷ ಚಂದ್ರಶೇಖರ್‌,ಜೆಡಿಎಸ್ ಮುಖಂಡ ವೆಂಕಟೇಶ್‌,ಸುನೀತ ಇದ್ದರು.