ನ್ಯಾಮತಿ ಬ್ಯಾಂಕ್‌ ದರೋಡೆ ಪ್ರಕರಣ: ಠಾಣೆಯಲ್ಲಿ ಬ್ಯಾಂಕರ್ಸ್‌ ಸಭೆ

| Published : Nov 02 2024, 01:33 AM IST / Updated: Nov 02 2024, 01:34 AM IST

ಸಾರಾಂಶ

ಬ್ಯಾಂಕು ಅಥವಾ ಫೈನಾನ್ಸ್‌ ಗಳಲ್ಲಿ ದಿನದ 24 ತಾಸು ಭದ್ರತಾ ರಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು.

ಹರಪನಹಳ್ಳಿ: ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಈಚೆಗೆ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರಣದಿಂದ ಎಚ್ಚೆತ್ತ ಇಲ್ಲಿಯ ಪೋಲೀಸ್‌ ಅಧಿಕಾರಿಗಳು ತಾಲೂಕಿನ ವಿವಿಧ ಬ್ಯಾಂಕುಗಳ ಅಧಿಕಾರಿಗಳ ಸಭೆಯನ್ನು ಸ್ಥಳೀಯ ಪೋಲೀಸ್‌ ಠಾಣೆಯಲ್ಲಿ ನಡೆಸಿ ಸಲಹೆ ಸೂಚನೆ ನೀಡಿದರು.

ಸಿಪಿಐ ನಾಗರಾಜ ಎಂ.ಕಮ್ಮಾರ ಮಾತನಾಡಿ, ಬ್ಯಾಂಕು ಅಥವಾ ಫೈನಾನ್ಸ್‌ ಗಳಲ್ಲಿ ದಿನದ 24 ತಾಸು ಭದ್ರತಾ ರಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಅಲಾರಾಂ ಅಳವಡಿಸಿಕೊಳ್ಳಬೇಕು. ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಕ್ಯಾಮೆರಾ ಸ್ಟೋರೇಜ್‌ ತಮ್ಮ ಬ್ಯಾಂಕಿನಲ್ಲಿ ಅಲ್ಲದೇ ನಿಮ್ಮ ಹೆಡ್‌ ಆಫೀಸ್ ನಲ್ಲೂ ಸ್ಟೋರೇಜ್‌ ಆಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಬ್ಯಾಂಕಿನ ಹೊರಗೆ ವಾಹನ ಪಾರ್ಕಿಂಗ್‌ ಕಾಣಿಸುವಂತೆ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಿದರು. ಪಿಎಸ್‌ಐ ಶಂಭುಲಿಂಗಹಿರೇಮಠ ಮಾತನಾಡಿ, ಯಾವುದೇ ಬ್ಯಾಂಕ್‌ ಕೆಲಸವಿಲ್ಲದೇ ಗ್ರಾಹಕರನ್ನು ಪರಿಶೀಲಿಸುವಂತಹ ಅನುಮಾನಾಸ್ಪದ ವ್ಯಕ್ತಿಗಳ ಕುರಿತು ಕೂಡಲೇ 112 ಅಥವಾ ಪೊಲೀಸ್‌ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲು ಸೂಚಿಸಿದರು.

ಸಭೆಯಲ್ಲಿ ಪಟ್ಟಣದ ಎಸ್‌ಬಿಐ ವ್ಯವಸ್ಥಾಪಕ ಬಿ.ಟಿ. ತಿಪ್ಪೇಶ ಹಾಗೂ ಜಯಕಾಂತ, ಎಚ್‌ಡಿಎಫ್‌ಸಿ ಬ್ಯಾಂಕಿನ ವ್ಯವಸ್ಥಾಪಕ ಸಾಹುಕಾರ ವಿ.ಎಂ., ಬಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ಬಿ.ಮರಿಸ್ವಾಮಿ, ಕರ್ನಾಟಕ ಬ್ಯಾಂಕ್‌ ಮ್ಯಾನೇಜರ್ ಚಲುವರಾಯ, ಬಜಾಜ್‌ ಫೈನಾನ್ಸ್‌ನ ರವಿಕಿರಣ, ಮುತ್ತೂಟ್ ಫೈನಾನ್ಸ್‌ನ ಕುಮಾರನಾಯ್ಕ ಸೇರಿದಂತೆ ಹಲವರು ಇದ್ದರು.

ಹರಪನಹಳ್ಳಿ ಪಟ್ಟಣದ ಠಾಣೆಯಲ್ಲಿ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರ ಸಭೆ ನಡೆಸಿದ ಸಿಪಿಐ ನಾಗರಾಜ ಕಮ್ಮಾರ ಸುರಕ್ಷತೆ ಕುರಿತು ಮಾಹಿತಿ ನೀಡಿದರು.