ನ್ಯಾಮತಿ ಪಟ್ಟಣದ ಹಾಗೂ ಸುತ್ತಮುತ್ತಲಿನ ವಿವಿಧ ದೇಗುಲಗಳಲ್ಲಿ ದಸರಾ ಮಹೋತ್ಸವ ಭಾನುವಾರದಿಂದ ಆರಂಭಗೊಂಡಿದ್ದು, ವಿವಿಧ ದೇಗುಲಗಳಲ್ಲಿ ಧಾರ್ಮಿಕ ಪೂಜೆಗಳು ಆರಂಭವಾಗಿವೆ. ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ಮಹಿಳೆಯರು ಸೂರ್ಯೋದಯಕ್ಕೆ ಮುನ್ನವೇ ಬನ್ನಿವೃಕ್ಷ ಪೂಜೆ ನೆರವೇರಿಸಿದರು.

ನ್ಯಾಮತಿ: ಪಟ್ಟಣದ ಹಾಗೂ ಸುತ್ತಮುತ್ತಲಿನ ವಿವಿಧ ದೇಗುಲಗಳಲ್ಲಿ ದಸರಾ ಮಹೋತ್ಸವ ಭಾನುವಾರದಿಂದ ಆರಂಭಗೊಂಡಿದ್ದು, ವಿವಿಧ ದೇಗುಲಗಳಲ್ಲಿ ಧಾರ್ಮಿಕ ಪೂಜೆಗಳು ಆರಂಭವಾಗಿವೆ. ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ಮಹಿಳೆಯರು ಸೂರ್ಯೋದಯಕ್ಕೆ ಮುನ್ನವೇ ಬನ್ನಿವೃಕ್ಷ ಪೂಜೆ ನೆರವೇರಿಸಿದರು.

ಪಟ್ಟಣದ ಕಾಳಿಕಾಂಬ ಬೀದಿಯ ಶ್ರೀ ಕಾಳಿಕಾಂಬ ದೇವಿ ದೇಗುಲದಲ್ಲಿ 11ರಂದು ಭಾನುವಾರ ಬೆಳಗ್ಗೆ ಗಂಗಾಪೂಜೆ, ಶ್ರೀಗಣಪತಿ, ಶ್ರೀ ಈಶ್ವರ, ಶ್ರೀ ಕಾಳಿಕಾಂಬ ದೇವಿ, ನವಗ್ರಹ ಮೂರ್ತಿಗಳಿಗೆ ಮತ್ತು ಬನ್ನಿವೃಕ್ಷಕ್ಕೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಬಳೀಕ ಘಟಸ್ಥಾಪನೆ, ದೇವಿ ಉಪಾಸನೆ ಮತ್ತು ಶ್ರೀ ದೇವಿ ಪುರಾಣ, ಪ್ರವಚನ, ಕಾರ್ಯಕ್ರಮಗಳೊಂದಿಗೆ ಶರನ್ನವರಾತ್ರಿ ಆಚರಣೆ ನೆರವೇರಿಸಿದ್ದಾರೆ.

ಅ.11ರಿಂದ 20ರವರೆಗೆ ಪ್ರತಿದಿನ ದುರ್ಗಾ ಸಪ್ತಶತಿ ಪಾರಾಯಣ, ಚಂಡಿ ಪಾರಾಯಣ, ಲಲಿತಾ ಪೂಜೆ, ಸರಸ್ವತಿ ಪೂಜೆ, ಲಲಿತಾ ಸಹಸ್ರನಾಮಾವಳಿ ಪಠಣ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಅಮ್ಮನಮರದ ದೇವಿ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಬಳಗದಿಂದ ವಿವಿಧ ಧಾರ್ಮಿಕ ಪೂಜೆ ಹಮ್ಮಿಕೊಳ್ಳಲಾಗಿದೆ. ಭಾನುವಾರದಿಂದ ಬೆಳಗ್ಗೆ 5 ಗಂಟೆಗೆ ಗಂಗಾಪೂಜೆ, ಅಮ್ಮನವರಿಗೆ ಅಭಿಷೇಕ ಹಾಗೂ ಘಟಸ್ಥಾಪನೆ ಮಾಡಿ ಸಂಜೆ 6 ಗಂಟೆಯಿಂದ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಶ್ರೀದೇವಿ ಮಹಾತ್ಮೆ ಪಾರಾಯಣ ನಡೆದು ರಾತ್ರಿ 8 ಗಂಟೆಗೆ 2 ವರ್ಷಗಳ ಮಕ್ಕಳಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ದೇವಿಯ ದೇವಸ್ಥಾನದಲ್ಲಿ ಅ.11ರಿಂದ 20ರವರೆಗೆ ಪ್ರತಿದಿನ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಶ್ರೀದೇವಿ ಮಹಾತ್ಮೆ ಪಾರಾಯಣ ನಡೆಯಲಿದೆ. ಪ್ರತಿದಿನ 2, 3 ಸೇರಿದಂತೆ 11 ವರ್ಷದವರೆಗಿನ ಮಕ್ಕಳಿಗೆ ಒಂದು ದಿನದಂತೆ 9 ದಿನ ಉಡಿತುಂಬುವ ವಿಶೇಷ ಕಾರ್ಯಕ್ರಮ ನಡೆಯಲಿದೆ.

ತಾಲೂಕಿನ ಕುರುವ ಗ್ರಾಮದಲ್ಲಿ ಗಡ್ಡೆ ರಾಮೇಶ್ವರ ದೇವರ ಘಟಸ್ಥಾಪನೆಯೊಂದಿಗೆ ದಸರಾ ಮಹೋತ್ಸವದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಕಲ್ಬಿಗಿರಿಯ ಬೆಟ್ಟದ ಲಕ್ಷ್ಮೀರಂಗನಾಥಸ್ವಾಮಿ ದೇಗುಲದಲ್ಲಿ 3 ದಿನಗಳ ಜಾತ್ರಾ ಮಹೋತ್ಸವ, ದಸರಾ ಮಹೋತ್ಸವವು ಅ.23ರಿಂದ 25ರವರೆಗೆ ಜರುಗಲಿದೆ. ಪಟ್ಟಣದ ಕಲ್ಮಠ ದೇಗುಲದ ಜಡೆಶಂಕರಲಿಂಗೇಶ್ವರ, ವೀರಭದ್ರೇಶ್ವರ ದೇಗುಲ, ಈಶ್ವರಲಿಂಗೇಶ್ವರ ದೇಗುಲ, ಬನಶಂಕರಿ ದೇಗುಲ, ಆಂಜನೇಯ ಸ್ವಾಮಿ ದೇಗುಲಗಳಲ್ಲಿ ಶರನ್ನವರಾತ್ರಿ ಅಂಗವಾಗಿ ಪ್ರತಿದಿನ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

- - -

(ಸಾಂದರ್ಭಿಕ ಚಿತ್ರ)