ಶೃಂಗೇರಿ ಕ್ಷೇತ್ರದಲ್ಲೂ ಓಟ್ ಚೋರಿ ಆಗಿದ್ದು, ಇದರ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶೃಂಗೇರಿ ಕ್ಷೇತ್ರದಲ್ಲೂ ಓಟ್ ಚೋರಿ ಆಗಿದ್ದು, ಇದರ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಿಬ್ಬಂದಿಯಿಂದಲೇ ಓಟ್ ಚೋರಿ ಆಗಿದೆ ಎನ್ನುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಇರುವ ಅನುಮಾನವನ್ನು ಸಿಎಂ ಅವರೇ ಹೇಳಿದ್ದಾರೆ ಎಂದರು.

ಚುನಾವಣೆ ನಡೆದಾಗಲೂ ಚುನಾವಣಾ ಆಯೋಗ ನೇಮಿಸಿದ್ದ ಅಧಿಕಾರಿಗಳೇ ಕೌಂಟ್ ಮಾಡಿದ್ದರು. ಈಗಲೂ ಅದೇ ಅಧಿಕಾರಿಗಳು ಕೌಂಟ್ ಮಾಡಿದ್ದಾರೆ. ಆವಾಗಲೂ ಅವರದೇ ಸರ್ಕಾರವಿತ್ತು, ಈಗಲೂ ಅವರದೇ ಸರ್ಕಾರವಿದೆ. ಅಂದು ರಾಜೇಗೌಡ ಅವರಿಗೆ 250 ಕ್ಕೂ ಹೆಚ್ಚು ಮತಗಳು ಬಂದಿವೆ ಎಂದು ಹೇಗೆ ಹೇಳಿದ್ದರು. ಇಂದು ಅದ್ಹೇಗೆ 56 ಮತಗಳು ಜೀವರಾಜ್ ಅವರಿಗೆ ಹೆಚ್ಚು ಬರಲು ಸಾಧ್ಯ. ಸಹಜವಾಗಿ ಓಟ್ ಟ್ಯಾಂಪರ್ ಆಗಿರಬೇಕು. ಒಂದೆರಡು ಓಟಗಳು ವ್ಯತ್ಯಾಸ ಆಗುವುದರಲ್ಲಿ ಸಹಜ ಎನ್ನಬಹುದು.

ಆದರೆ 170 ಕ್ಕೂ ಹೆಚ್ಚು ಮತಗಳು ಹೇಗೆ ವ್ಯತ್ಯಾಸ ಆಗುತ್ತವೆ. ಇದನ್ನು ನೋಡಿದರೆ ಓಟ್ ಟ್ಯಾಂಪರ್ ಆಗಿದೆ ಎಂತಲೇ ಅರ್ಥ ಇದರ ಕುರಿತು ಸರಿಯಾದ ತನಿಖೆ ನಡೆಯಬೇಕು ಎಂದರು. ಇದರ ಜವಾಬ್ದಾರಿಯನ್ನು ಚುನಾವಣಾ ಅಧಿಕಾರಿಯೇ ಹೊರಬೇಕು. ಉತ್ತರ ಪ್ರದೇಶದ ಯಾರೋ ಕ್ರಿಮಿನಲ್ ಅಧಿಕಾರಿಯನ್ನು ಪಶ್ಚಿಮ ಬಂಗಾಳಕ್ಕೆ ಹಾಕಿದರು. ಅದೇ ರೀತಿ ಶೃಂಗೇರಿ ಕ್ಷೇತ್ರದಲ್ಲೂ ಆಗಿದೆ ಎಂದರು.