ಸಾರಾಂಶ
ಒಂದು ವೇಳೆ ಮಗುವನ್ನು ಹಾಜರುಪಡಿಸಲು ವಿಫಲವಾದಲ್ಲಿ ಅಥವಾ ಮಾಹಿತಿ ನೀಡಲು ವಿಫಲವಾದಲ್ಲಿ, ಆರು ತಿಂಗಳ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಬಹುದಾಗಿದೆ.
ಕೊಪ್ಪಳ: ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ ತಿದ್ದುಪಡಿ ಅನ್ವಯ ಪರಿತ್ಯಜಿಸಿದ, ಪರಿತ್ಯಕ್ತ, ತೊರೆದು ಹೋದ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಕಲ್ಯಾಣ ಸಮಿತಿಗೆ ಮಗು ಹಾಜರುಪಡಿಸುವುದು ಅಥವಾ ಮಾಹಿತಿ ನೀಡುವುದು ಕಡ್ಡಾಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ಮಿಷನ್ ವಾತ್ಸಲ್ಯ ಕುರಿತು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ವೇಳೆ ಮಗುವನ್ನು ಹಾಜರುಪಡಿಸಲು ವಿಫಲವಾದಲ್ಲಿ ಅಥವಾ ಮಾಹಿತಿ ನೀಡಲು ವಿಫಲವಾದಲ್ಲಿ, ಆರು ತಿಂಗಳ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಬಹುದಾಗಿದೆ ಎಂದು ಅವರು ಹೇಳಿದರು.ಯಾವುದೇ ಮಗುವನ್ನು ಅನಧಿಕೃತವಾಗಿ ದತ್ತು ಪಡೆದಲ್ಲಿ, ಮಾರಾಟ ಮಾಡಿದಲ್ಲಿ ಕಾಯ್ದೆಯಡಿ ಐದು ವರ್ಷ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಬಹುದಾಗಿದೆ. ಈ ರೀತಿಯ ಕೃತ್ಯದಲ್ಲಿ ಆಸ್ಪತ್ರೆಯ ಅಧಿಕಾರಿಗಳು ಅಥವಾ ಸಿಬ್ಬಂದಿ ಭಾಗವಹಿಸಿದ್ದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ, ₹1 ಲಕ್ಷ ದಂಡ ವಿಧಿಸಬಹುದಾಗಿದೆ ಎಂದರು.ವೈದ್ಯಾಧಿಕಾರಿಯು ಸೂಕ್ತ ವೈದ್ಯಕೀಯ ದಾಖಲಾತಿ, ಸೂಕ್ತ ಕಾರಣದಿಂದ 20 ವಾರದೊಳಗಿನ ಗರ್ಭವನ್ನು ವೈದ್ಯಕೀಯ ಗರ್ಭಪಾತ ಮಾಡಿಸಬಹುದಾಗಿದೆ. 20 ವಾರಕ್ಕೂ ಮೇಲ್ಪಟ್ಟ ಹಾಗೂ 24 ವಾರದೊಳಗಿನ ಗರ್ಭಪಾತವನ್ನು ಕನಿಷ್ಠ 2 ವೈದ್ಯಾಧಿಕಾರಿಗಳ ಶಿಫಾರಸು ಅನ್ವಯ ವೈದ್ಯಕೀಯ ಗರ್ಭಪಾತ ಮಾಡಿಸಬಹುದಾಗಿದೆ ಎಂದು ವಿವರಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ ಇಟಗಿ ಅವರು ಮಾತನಾಡಿ, ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಅನುಷ್ಠಾನವು ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿರುತ್ತದೆ. ಮಕ್ಕಳು ಅಥವಾ ಮಕ್ಕಳ ಸಂಬಂಧಿತ ಪ್ರಕರಣಗಳನ್ನು ನಿರ್ವಹಿಸುವಾಗ ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.ಯುನಿಸೆಫ್ ವಿಭಾಗೀಯ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ವೇಣುಗೋಪಾಲ, ಕಿಮ್ಸ್ ನರ್ಸಿಂಗ್ ವಿಭಾಗದ ಪ್ರಾಚಾರ್ಯ ಡಾ.ರಾಮು ಸೇರಿದಂತೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಡಾ.ಸುಮಲತಾ ಆಕಳವಾಡಿ ನಿರೂಪಿಸಿದರು. ಶಿವಲೀಲಾ ವನ್ನೂರು ಸ್ವಾಗತಿಸಿದರು, ಪ್ರಶಾಂತರಡ್ಡಿ ವಂದಿಸಿದರು.