ಸಾರಾಂಶ
ಜೀವ ಅಮೂಲ್ಯವಾದುದು. ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕಾನೂನುಗಳನ್ನು ಗೌರವಿಸಬೇಕು ಎಂದು ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ವಾಹನಗಳ ಚಾಲನಾ ಪರವಾನಗಿ, ಸೂಕ್ತ ದಾಖಲೆಗಳು ಇಲ್ಲದೇ ವಾಹನಗಳನ್ನು ಚಲಾಯಿಸಬಾರದು ಎಂದು ನಾಪೋಕ್ಲುಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ಸಮೀಪದ ಚೆರಿಯಪರಂಬುವಿನ ಕರ್ನಾಟಕ ಪಬ್ಲಿಕ್ ಶಾಲಾ(kps) ಮೈದಾನದಲ್ಲಿ ಶನಿವಾರ ಸ್ಥಳೀಯ ಯುವಕರಿಗೆ ಹಾಗೂ ವಾಹನ ಸವಾರರಿಗೆ ತಿಳಿಹೇಳಿದ ಅವರು ಜೀವ ಅಮೂಲ್ಯವಾದುದು. ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕಾನೂನುಗಳನ್ನು ಗೌರವಿಸಬೇಕು ಎಂದರು.ವಾಹನ ಸವಾರರನ್ನು ತಪಾಸಣೆ ಮಾಡಿ ಹೆಲ್ಮೆಟ್ ಹಾಕದೇ ಚಲಾಯಿಸದವರಿಗೆ, ಇನ್ಸೂರೆನ್ಸ್ ಇಲ್ಲದ, ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡಿದವರಿಗೆ, ಬೈಕ್ ಗಳಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಕುಳಿತು ಸಾಗಿದವರಿಗೆ ತಿಳುವಳಿಕೆ ಮೂಡಿಸಿ, ಎಚ್ಚರಿಕೆ ನೀಡಲಾಯಿತು. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಿ ವಾಹನಗಳಿಗೆ ಜನಸಾಮಾನ್ಯರಿಗೆ ಅಡ್ಡಿಪಡಿಸುವುದು, ಅಪ್ರಾಪ್ತ ಯುವಕರು ವಾಹನ ಚಾಲನೆ ಮಾಡುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭ ಯುವಕರು ನಾವು ಹೆಲ್ಮೆಟ್ ಹಾಕಿ ಕಾನೂನು ಪಾಲನೆ ಮಾಡಿ ಸಹಕರಿಸುವುದಾಗಿ ಠಾಣಾಧಿಕಾರಿಗೆ ಭರವಸೆಯನ್ನು ನೀಡಿದರು.