ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಿ

| Published : Dec 17 2023, 01:45 AM IST

ಸಾರಾಂಶ

ಪ್ರತಿಯೊಬ್ಬ ನಾಗರಿಕರು ವಾಹನ ಚಲಾವಣೆ, ರಸ್ತೆ ದಾಟುವ ವೇಳೆ ಸೇರಿ ಇತರ ಸಂಚಾರದ ವೇಳೆ ಕಡ್ಡಾಯವಾಗಿ ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಇದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಲು ಸಾಧ್ಯ ಎಂದು ಸಿಪಿಐ ಬಸವರಾಜ ಪಿ.ಎಸ್. ಹೇಳಿದರು.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಪ್ರತಿಯೊಬ್ಬ ನಾಗರಿಕರು ವಾಹನ ಚಲಾವಣೆ, ರಸ್ತೆ ದಾಟುವ ವೇಳೆ ಸೇರಿ ಇತರ ಸಂಚಾರದ ವೇಳೆ ಕಡ್ಡಾಯವಾಗಿ ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಇದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಲು ಸಾಧ್ಯ ಎಂದು ಸಿಪಿಐ ಬಸವರಾಜ ಪಿ.ಎಸ್. ಹೇಳಿದರು.

ಪಟ್ಟಣದ ಸಿಇಎಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಕೆ.ಎಚ್. ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಿರೇಕೆರೂರು ಪೊಲೀಸ್ ಠಾಣೆ ಆಶ್ರಯದಲ್ಲಿ ನಡೆದ ಮಕ್ಕಳಿಗೆ ಸಾರಿಗೆ ನಿಯಮಗಳು ಹಾಗೂ ವಿವಿಧ ಕಾನೂನುಗಳ ಅಪರಾಧ ತಡೆಯುವ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಹನ ಚಲಾವಣೆ ಮಾಡುವ ಯುವಕರು ಕಡ್ಡಾಯವಾಗಿ ಪರವಾನಗಿ ಹೊಂದಬೇಕು. ವಾಹನದ ನೋಂದಣಿ, ಇನ್ಸೂರೆನ್ಸ್ ಹೊಂದಿದ್ದರೆ, ಅಪಘಾತ ಸಂದರ್ಭಗಳಲ್ಲಿ ನೆರವಾಗುತ್ತದೆ. ಇನ್ನೂ ಕಡ್ಡಾಯವಾಗಿ ಹೆಲ್ಮೆಟ್‌ಗಳನ್ನು ಧರಿಸಿದರೆ ಜೀವ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು. ಇಂದಿನ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ರಸ್ತೆ ಅಪಘಾತಗಳಲ್ಲಿ ಬೇಜವಾಬ್ದಾರಿತನದಿಂದ ಅಕಾಲಿಕವಾಗಿ ಸಾಯುವ ಜನರ ಸಂಖ್ಯೆಯೇ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಾರಿಗೆ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಪಿಎಸ್‌ಐ ನೀಲಪ್ಪ ನರನಾಲ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೇ ಅಪಘಾತವು ಸಂಭವಿಸಿ ನಮ್ಮ ಅಮೂಲ್ಯವಾದ ಪ್ರಾಣವು ಹೋಗುತ್ತದೆ. ನಾವು ಶಾಶ್ವತವಾಗಿ ಅಂಗವಿಕಲರಾಗುತ್ತೇವೆ ಎಂದು ತಿಳಿದಿದ್ದರೂ ಅಡ್ಡಾದಿಡ್ಡಿಯಾಗಿ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಬಲಿಯಾಗಿ ನಮ್ಮನ್ನು ನಂಬಿರುವ ಕುಟುಂಬದ ಸದಸ್ಯರು, ತಂದೆ-ತಾಯಿ, ಹೆಂಡತಿ-ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದ್ದೇವೆ. ಸಂಚಾರಿ ನಿಯಮಗಳನ್ನು ಪಾಲಿಸಿದರೆ ನಾವು ಮತ್ತು ನಮ್ಮ ಕುಟುಂಬ ಸುರಕ್ಷಿತವಾಗಿರುತ್ತದೆ. ಇದರ ಜತೆಗೆ ಇತರ ಕಾನೂನುಗಳನ್ನು ವಿದ್ಯಾರ್ಥಿ ದೆಸೆಯಲ್ಲಿ ಅರಿವು ಮೂಡಿಸಿಕೊಂಡರೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ, ಏಕೇಶಣ್ಣ ಬಣಕಾರ, ಪ್ರಾಚಾರ್ಯ ಕೆ.ಆರ್. ಲಮಾಣಿ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.