ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ನೀಡುತ್ತಿರುವ ಸಹಾಯ ಧನ ಸದ್ವಿನಿಯೋಗಬೇಕಾಗಿದೆ

ಹಗರಿಬೊಮ್ಮನಹಳ್ಳಿ: ಗೃಹಲಕ್ಷ್ಮಿ ಹಣ ಮಹಿಳೆಯರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಅಧಿಕಾರಿಗಳ ಕ್ರಮವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ ಆಕ್ಷೇಪಿಸಿದರು.

ಪಟ್ಟಣದ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ನೀಡುತ್ತಿರುವ ಸಹಾಯ ಧನ ಸದ್ವಿನಿಯೋಗಬೇಕಾಗಿದೆ. ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ಒಟ್ಟು ೩೨,೫೪೮ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ ₹೬.೫೦ ಕೋಟಿ ಪಾವತಿಸಲಾಗಿದೆ. ಗೃಹಲಕ್ಷ್ಮಿ ಮೊತ್ತ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಕೂಡಲೆ ಪತ್ರ ಬರೆಯುವಂತೆ ಸೂಚಿಸಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ನಾಗರತ್ನ ಸಹಮತ ವ್ಯಕ್ತಪಡಿಸಿದರು.

ಕಳೆದ ೨ ತಿಂಗಳಲ್ಲಿ ಒಟ್ಟು ೧೦,೭೭,೩೭೨ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ಇದರಿಂದ ಸಾರಿಗೆ ಇಲಾಖೆಗೆ ₹೪,೫೦ ಕೋಟಿ ಪಾವತಿಯಾಗಿದೆ ಎಂದು ಸಾರಿಗೆ ಘಟಕದ ಜಗದೀಶ ನಾಯ್ಕ ತಿಳಿಸಿದರು. ಕಳೆದ ಸಭೆಯಲ್ಲಿ ಚರ್ಚಿಸಿದಂತೆ ನಾನಾ ಮಾರ್ಗಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿ ಬಸ್ ಸಂಚಾರ ಆರಂಭಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಗೌರಜ್ಜನವರ ಗಿರೀಶ್ ಮಾತನಾಡಿ, ತಂಬ್ರಹಳ್ಳಿಯಲ್ಲಿ ವಿದ್ಯುತ್ ಕಂಬ ಅಳವಡಿಸಿದ್ದರೂ ತಂತಿ ಎಳೆದಿಲ್ಲ ಎಂದಾಗ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಪ್ರತಿಕ್ರಿಯಿಸಿದರು. ತಿಂಗಳಿಗೆ ಯೋಜನೆಯಡಿ ₹೨ ಕೋಟಿಗೂ ಹೆಚ್ಚು ಮೊತ್ತ ಪಾವತಿಯಾಗುತ್ತಿದೆ, ಗೃಹಜ್ಯೋತಿ ಯೋಜನೆಯಡಿ ಶೇ.೯೫ರಷ್ಟು ಸಮೀಕ್ಷೆ ಪೂರ್ಣವಾಗಿದೆ ಎಂದು ಜೆಸ್ಕಾಂ ಅಧಿಕಾರಿ ರವಿಕುಮಾರ್ ತಿಳಿಸಿದರು.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪಡಿತರ ಗ್ರಾಹಕರಿಗೆ ಸಹಕಾರಿಯಾಗಿ ನ್ಯಾಯಬೆಲೆ ಅಂಗಡಿಗಳಿಂದ ಹೆಚ್ಚುವರಿ ಪಾಯಿಂಟ್ ಆರಂಭಿಸುವ ಪ್ರಸ್ತಾವನೆ ಇದೆ. ಈ ಕುರಿತು ಹಲವು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ ಎಂದು ಆಹಾರ ನಿರೀಕ್ಷಕಿ ಮಮತಾ ಹಿರೇಮಠ ತಿಳಿಸಿದರು.

ಇತ್ತೀಚೆಗೆ ಮಸಾರಿ ನೆಲ್ಕುದ್ರಿ ಗ್ರಾಮಸ್ಥರು ಪಡಿತರ ಸಾಮಾಗ್ರಿ ಹೊಂದಲು ೧೬ ಕಿಮೀ ದೂರ ಆಟೋದಲ್ಲಿ ಸಾಗಬೇಕಾದ ಪರಿಸ್ಥಿತಿ ಕುರಿತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಚ್. ಜಂದಿಸಾಹೇಬ್ ಅಧಿಕಾರಿಗಳ ಗಮನಸೆಳೆದರು. ಗ್ರಾಮಸ್ಥರಿಂದ ಅರ್ಜಿ ಸಲ್ಲಿಕೆಯಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಹಾರ ನಿರೀಕ್ಷಕಿ ಪ್ರತಿಕ್ರಿಯಿಸಿದರು. ಅಕ್ಕಿ ಬೆಲೆ ಏರಿಕೆ ಹಿನ್ನೆಲೆ ಕಾಳಸಂತೆಯಲ್ಲಿ ಮಾರಾಟಕ್ಕೆ ತಡೆಗಟ್ಟಬೇಕು. ಗ್ರಾಹಕರಿಗೆ ಸಮರ್ಪಕವಾಗಿ ಒದಗಿಸಬೇಕು ಎಂದು ಜಂದಿಸಾಹೇಬ್ ಸೂಚಿಸಿದರು.

ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ, ತಾಲೂಕು ಸಮಿತಿ ಸದಸ್ಯ ರಾಘವೇಂದ್ರ ಉಲುವತ್ತಿ, ವೆಂಕಟೇಶ್ ನಾಯ್ಕ, ಸರ್ದಾರ್ ರಾಮಣ್ಣ, ಸಂತೋಷ್, ಬಲ್ಲಾಹುಣ್ಸಿ ಹನುಮಂತ, ಸದ್ದಾಂ ಹುಸೇನ್, ನಾಗಮ್ಮ ಕದರಮ್ಮನವರ ಇತರರಿದ್ದರು. ತಾಪಂ ಸಿಬ್ಬಂದಿ ಲಕ್ಷ್ಮೀ ನೆಲ್ಕುದ್ರಿ, ವ್ಯವಸ್ಥಾಪಕ ಬಸವರಾಜ ನಿರ್ವಹಿಸಿದರು.