ಮಾರಂಭದ ಉದ್ಘಾಟನೆ ವೇಳೆ ಸಂಸದ ಶ್ರೇಯಸ್ ಪಟೇಲ್ ಅವರ ಹೆಸರು ಪ್ರಸ್ತಾಪಿಸದಿರುವುದು ಹಾಗೂ ಅವರು ಆಗಮಿಸುವ ಮುನ್ನವೇ ಕಾರ್ಯಕ್ರಮ ಆರಂಭಿಸಿರುವುದಕ್ಕೆ ಅವರ ಬೆಂಬಲಿಗರು ಮತ್ತು ಕೆಲ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಂಸದರು ಬರುವವರೆಗೆ ಕಾರ್ಯಕ್ರಮ ಆರಂಭಿಸಬಾರದಿತ್ತು. ಕನಿಷ್ಠ ಉದ್ಘಾಟನೆ ವೇಳೆ ಅವರ ಹೆಸರನ್ನಾದರೂ ಪ್ರಸ್ತಾಪಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕರ್ತರು ಗಲಾಟೆ ಮಾಡಲು ಬಂದಿದ್ದೀರಾ ಅಥವಾ ಪಕ್ಷವನ್ನು ಬಲಪಡಿಸಲು ಬಂದಿದ್ದೀರಾ? ಎಂದು ಸಚಿವರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕೆಲವರು ಸಚಿವರ ಮಾತಿಗೂ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮುಂದುವರಿದಿದ್ದು, ಶುಕ್ರವಾರ ಜಿಲ್ಲಾ ಕಾಂಗ್ರೆಸ್ ನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದ ಆರಂಭಕ್ಕೂ ಮುನ್ನವೇ ಸಂಸದ ಶ್ರೇಯಸ್ ಪಟೇಲ್ ಅವರ ಹೆಸರು ಹೇಳದಿರುವುದು ಹಾಗೂ ಸಂಸದರ ಆಗಮನಕ್ಕೂ ಕಾಯದೇ ಕಾರ್ಯಕ್ರಮ ಆರಂಭಿಸಿದ್ದು, ಗೊಂದಲ ಹಾಗೂ ಅಸಮಾಧಾನಕ್ಕೆ ಕಾರಣವಾಯಿತು.

ನಗರದ ಬಿ.ಎಂ. ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಶಶಿಧರ್ ಅವರ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಾರಂಭದ ಉದ್ಘಾಟನೆ ವೇಳೆ ಸಂಸದ ಶ್ರೇಯಸ್ ಪಟೇಲ್ ಅವರ ಹೆಸರು ಪ್ರಸ್ತಾಪಿಸದಿರುವುದು ಹಾಗೂ ಅವರು ಆಗಮಿಸುವ ಮುನ್ನವೇ ಕಾರ್ಯಕ್ರಮ ಆರಂಭಿಸಿರುವುದಕ್ಕೆ ಅವರ ಬೆಂಬಲಿಗರು ಮತ್ತು ಕೆಲ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಂಸದರು ಬರುವವರೆಗೆ ಕಾರ್ಯಕ್ರಮ ಆರಂಭಿಸಬಾರದಿತ್ತು. ಕನಿಷ್ಠ ಉದ್ಘಾಟನೆ ವೇಳೆ ಅವರ ಹೆಸರನ್ನಾದರೂ ಪ್ರಸ್ತಾಪಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕರ್ತರ ಆಕ್ಷೇಪದಿಂದಾಗಿ ಕೆಲಕಾಲ ಕಾರ್ಯಕ್ರಮದ ವಾತಾವರಣ ಗೊಂದಲಮಯವಾಗಿ ಮಾರ್ಪಟ್ಟಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಂಸದರಿಗೆ ತಾವೇ ದೂರವಾಣಿ ಮೂಲಕ ಕರೆ ಮಾಡಿದ್ದು, ಅವರು ಮತ್ತೊಂದು ಕಾರ್ಯಕ್ರಮದಲ್ಲಿರುವುದಾಗಿ ತಿಳಿಸಿ ಸಮಾರಂಭ ಮುಂದುವರಿಸುವಂತೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕಾರ್ಯಕರ್ತರು ಗಲಾಟೆ ಮಾಡಲು ಬಂದಿದ್ದೀರಾ ಅಥವಾ ಪಕ್ಷವನ್ನು ಬಲಪಡಿಸಲು ಬಂದಿದ್ದೀರಾ? ಎಂದು ಸಚಿವರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕೆಲವರು ಸಚಿವರ ಮಾತಿಗೂ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಕಾಂಗ್ರೆಸ್ ಕಚೇರಿಯಲ್ಲೇ ಗೊಂದಲ ನಡೆದರೆ ಪಕ್ಷದೊಳಗೆ ಒಗ್ಗಟ್ಟಿಲ್ಲ ಎಂಬ ಸಂದೇಶ ರವಾನೆಯಾಗಲಿದೆ. ಇಂತಹ ಬೆಳವಣಿಗೆ ಪಕ್ಷಕ್ಕೆ ಹಿನ್ನಡೆಯಾಗಬಹುದು. ಹೀಗಾಗಿ ಎಲ್ಲರೂ ಶಾಂತವಾಗಿ ನಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಈ ಬೆಳವಣಿಗೆಯಿಂದಾಗಿ ಕಾರ್ಯಕ್ರಮ ಕೆಲಕಾಲ ಸ್ಥಗಿತಗೊಂಡು ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದ ನಂತರ ಕಾರ್ಯಕ್ರಮ ಮುಂದುವರಿಯಿತು. ಇದಾದ ಕೆಲ ನಿಮಿಷದಲ್ಲೇ ಸಂಸದ ಶ್ರೇಯಸ್ ಎಂ ಪಟೇಲ್ ಕಾರ್ಯಕ್ರಮಕ್ಕೆ ಆಗಮಿಸಿದರು.