ಕುಸನೂರು ಜಮೀನು ಉದ್ಯಾನವನ ಕೈಬಿಟ್ಟು ವಾಣಿಜ್ಯ ಉಪಯೋಗಕ್ಕೆ ಆಕ್ಷೇಪ

| Published : Feb 19 2025, 12:49 AM IST

ಕುಸನೂರು ಜಮೀನು ಉದ್ಯಾನವನ ಕೈಬಿಟ್ಟು ವಾಣಿಜ್ಯ ಉಪಯೋಗಕ್ಕೆ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

Objection to commercial use of Kusanur land, leaving it a park

- ವಾಣಿಜ್ಯ ಬಳಕೆಗೆ ಅನುಮತಿಸಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಿದ್ದಾರ್ಥ ವಿಹಾರ ಟ್ರಸ್ಟ್‌ ಮನವಿ

----

ಕನ್ನಡಪ್ರಭ ವಾರ್ತೆ, ಕಲಬುರಗಿ.

ಸಿದ್ದಾರ್ಥ ವಿಹಾರ ಟ್ರಸ್ಟ್‌ ಅಡಿಯಲ್ಲಿರುವ ಕುಸನೂರು ಗ್ರಾಮದ ಸರ್ವೇ ನಂಬರ್‌ 82- 3 ರಲ್ಲಿರುವ 2 ಎಕರೆ 7 ಗುಂಟೆ ಜಮೀನನ್ನು ಉದ್ಯಾನವನ ವಲಯದಿಂದ ಕೈಬಿಟ್ಟು ವಾಣಿಜ್ಯ ಉಪಯೋಗಕ್ಕೆ ನಿಗದಿಪಡಿಸಲು ಸಲ್ಲಿಕೆಯಾಗಿರುವ ಕೋರಿಕೆಯಂತೆ ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುವ ಭೂ ಉಪಯೋಗ ನಿಗದಿಗೊಳಿಸುವ ಪ್ರಕಟಣೆಗೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅದ್ಯಕ್ಷ ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಶ್ರೀಗಳು ಆಕ್ಷೇಪಣೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಶ್ರೀಗಳು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ತಕರಾರು ಅರ್ಜಿ ಸಲ್ಲಿಸಿದ್ದು ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಸಿದ್ದಾರ್ಥ ವಿಹಾರ ಟ್ರಸ್ಟ್‌ ಕಾರ್ಯದರ್ಶಿ, ಕಲಬುರಗಿ ಹಾಲಿ ಸಂಸದ ರಾಧಾಕೃಷ್ಣ ದೊಡ್ಮನಿಯವರು ಈ ಭೂ ಉಪಯೋಗ ನಿಗದಿಗೊಳಿಸುವ ಬಗ್ಗೆ ಮನವಿ ಸಲ್ಲಿಸಿದ್ದರು.

ಈ ಜಮೀನಿನ ಪಕ್ಕದಲ್ಲಿರುವ ಸರ್ವೇ ನಂಬರ್‌ 83 ರ 33 ಎಕರೆ ಜಮೀನು ಪ್ರಾಧಿಕಾರ ಉದ್ಯಾನವನ ಕ್ಕೆ ಮೀಸಲಿಟ್ಟಿದೆ. ಎಕರೆಗೆ 50 ಲಕ್ಷ ರು. ಕೊಟ್ಟು ಜಮೀನು ಖರೀದಿಸಿರುವ ಪ್ರಾಧಿಕಾರ, ಉದ್ಯಾನವನ ನಿರ್ಮಿಸದೆ ಹಾಗೇ ಬಿಟ್ಟಿದೆ.

ಬಹುಕೋಟಿ ಹಣ ವೆಚ್ಚಮಾಡಿ ಜಮೀನು ಖರೀದಿಸಿ ಉದ್ಯಾನವನ ವಲಯ ನಿಗದಿಪಡಿಸಿರುವ ಪ್ರಾಧಿಕಾರ ಅಲ್ಲಿ ಏನನ್ನೂ ಮಾಡದೆ ಹಣ ಪೋಲು ಮಾಡಿದೆ. ಇದೀಗ ಸಿದ್ದಾರ್ಥ ವಿಹಾರ ಟ್ರಸ್ಟ್‌ನವರು 2 ಎಕರೆ 7 ಗುಂಟೆ ಜಮೀನು ವಾಣಿಜ್ಯ ಬಳಕೆಗೆ ಕೇಳುತ್ತಿದ್ದಾರೆ. ಇದರ ಹಿಂದೆ ಸ್ವ ಹಿತಾಸಕ್ತಿ, ಸ್ವಾರ್ಥ ಸಾಧನೆ ಅಡಗಿದೆ ಎಂದು ಆಂದೋಲಾ ಸಿದ್ದಲಿಂಗ ಶ್ರೀಗಳು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸಲ್ಲಿಸಿರುವ ತಕರಾರು ಆಕ್ಷೇಪಣೆ ಅರ್ಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2 ಎಕರೆ 7 ಗುಂಟೆ ಜಮೀನು ಐತಿಹಾಸಿಕ ಬುದ್ದ ವಿಹಾರ ಸಮೀಪ ಇದೆ. ಈಗಾಗಲೇ ಕಾಲೇಜು, ಇತರೆ ಕಟ್ಟಡಗಳಿವೆ. ಈ ಜಮೀನು ಉದ್ಯಾನವನ್ನಾಗಿ ಪ್ರಗತಿ ಕಂಡಲ್ಲಿ ಹೆಚ್ಚಿನ ಅನುಕೂಲವಾಗಲಿದೆ, ಇದನ್ನು ಬಿಟ್ಟು ವಾಣಿಜ್ಯ ಬಳಕೆಗೆ ಬದಲಿಸಿದರೆ ಪ್ರಯೋಜನವಾಗುವುದಿಲ್ಲ. ಬಿಸಿಲೂರು ಹಸಿರಾಗಲು ಇಂತಹ ಪ್ರದೇಶಗಳಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಬೇಕೇ ಹೊರತು ವಾಣಿಜ್ಯೀಕರಣಕ್ಕೆ ಅವಕಾಶ ನೀಡಬಾರದು ಎಂದು ಆಂದೋಲಾ ಶ್ರೀಗಳು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಕರಾರು ಅರ್ಜಿ ಸಲ್ಲಿಸಿ ಒತ್ತಾಯಿಸಿದ್ದಾರೆ.

----

ಫೋಟೋ- ಆಂದೋಲಾ ಶ್ರೀಗಳು