ಸಾರಾಂಶ
ಒಂದು ವೇಳೆ ಕೊಡವ ಲ್ಯಾಂಡ್ ರಚನೆಯಾದಲ್ಲಿ ಈ ತಾರತಮ್ಯವು ಭಾರತದ ರಾಜ್ಯಾಂಗದ ಪ್ರಕಾರ ಭಾರತೀಯರೆಲ್ಲರೂ ಒಂದೇ ಎಂಬ ಉದಾತ್ತ ನಿಯಮದ ಉಲ್ಲಂಘನೆಯಾಗುತ್ತದೆ. ಇದರಿಂದ ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿ ಕೊಡಗಿನಲ್ಲಿ ಆಂತರಿಕ ಕಲಹ ಉದ್ಭವಿಸುವ ಸಾಧ್ಯತೆ ಅಧಿಕವಾಗಿದೆ ಎಂದು ನಾಗರಿಕ ವೇದಿಕೆ ಆರೋಪಿಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸರ್ಕಾರದ ಮುಂದಿಟ್ಟಿರುವ ಕೊಡವ ಲ್ಯಾಂಡ್ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ‘ಕೊಡಗು ಸೌಹಾರ್ದ ನಾಗರಿಕ ವೇದಿಕೆ’ ಕೊಡಗಿನ ಬಹುಸಂಖ್ಯಾತ ಜನರ ಹಿತರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.ಮುಖ್ಯಮಂತ್ರಿಗಳು ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ನಾಗರಿಕ ವೇದಿಕೆಯ ಸಂಚಾಲಕ ಎಸ್.ಎಂ.ಚಂಗಪ್ಪ ಮತ್ತಿತರರು ಕೊಡವ ಲ್ಯಾಂಡ್ ರಚನೆಗೆ ಅವಕಾಶ ನೀಡಬಾರದು ಮತ್ತು ಈ ಕುರಿತು ಸರ್ಕಾರ ಕಾನೂನು ಹೋರಾಟ ನಡೆಸಬೇಕೆಂದು ಕೋರಿದರು.1956ರ ಹಿಂದೆ ಸಂವಿಧಾನದ 7ನೇ ಶೆಡ್ಯೂಲ್ ಪ್ರಕಾರ ‘ಸಿ’ ರಾಜ್ಯವಾಗಿದ್ದ ಕೊಡಗು, ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭ ಮೈಸೂರು ರಾಜ್ಯ ರೂಪುಗೊಂಡಾಗ ಅದರ ಅವಿಭಾಜ್ಯ ಅಂಗವಾಗಿತ್ತು. ಈಗ ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿ ಒಂದಾಗಿದೆ.ಕೊಡಗು ಜಿಲ್ಲೆಯ ‘ಕೊಡವ ನ್ಯಾಷನಲ್ ಕೌನ್ಸಿಲ್’ (ಸಿಎನ್‌ಸಿ) ಎಂಬ ಸಂಘಟನೆ ‘ಕೊಡವ ಲ್ಯಾಂಡ್’ ಸ್ಥಾಪನೆಯ ಆಗ್ರಹದೊಂದಿಗೆ ಕಳೆದ ಕೆಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಆ ಹೋರಾಟಕ್ಕೆ ಒಂದಷ್ಟು ಜನ ಬೆಂಬಲಿಸುತ್ತಿರುವುದು ಬಿಟ್ಟರೆ ಜಿಲ್ಲೆಯಲ್ಲಿರುವ ವಿವಿಧ ಜನಾಂಗಗಳು ಜನವಿರೋಧಿ ಕೋರಿಕೆಯನ್ನು ವಿರೋಧಿಸುತ್ತಾ ಬಂದಿದ್ದಾರೆ.ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯ ಬೇಡಿಕೆಯನ್ನೂ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದು, ಕೊಡಗಿನ ಇತರ ಸಮುದಾಯದ ಜನ ಆತಂಕಗೊಂಡಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಹಿರಿಯ ವಕೀಲ ಡಾ.ಸುಬ್ರಮಣಿಯಂ ಸ್ವಾಮಿ ಅವರು ಸಿಎನ್‌ಸಿ ಬೇಡಿಕೆ ಪರ ಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಒಂದು ವೇಳೆ ಕೊಡವ ಲ್ಯಾಂಡ್ ರಚನೆಯಾದಲ್ಲಿ ಈ ತಾರತಮ್ಯವು ಭಾರತದ ರಾಜ್ಯಾಂಗದ ಪ್ರಕಾರ ಭಾರತೀಯರೆಲ್ಲರೂ ಒಂದೇ ಎಂಬ ಉದಾತ್ತ ನಿಯಮದ ಉಲ್ಲಂಘನೆಯಾಗುತ್ತದೆ. ಭಾರತೀಯರು ದೇಶದ ಯಾವುದೇ ಭಾಗದಲ್ಲಿ ತಮ್ಮ ಬದುಕು ಕಂಡುಕೊಳ್ಳುವುದನ್ನು ಇದು ಪ್ರತಿರೋಧಿಸುತ್ತದೆ. ಕೊಡಗಿನ ಕೊಡವೇತರ ಜನರನ್ನು ಪ್ರತ್ಯೇಕಗೊಳಿಸಿ ಅವರನ್ನು ಎರಡನೆಯ ದರ್ಜೆಯ ಸ್ಥಾನಮಾನಕ್ಕೆ ಇಳಿಸುವುದು ಈ ಬೇಡಿಕೆಯ ಹಿಂದಿರುವ ಹುನ್ನಾರವಾಗಿದೆ. ಇದರಿಂದ ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿ ಕೊಡಗಿನಲ್ಲಿ ಆಂತರಿಕ ಕಲಹ ಉದ್ಭವಿಸುವ ಸಾಧ್ಯತೆ ಅಧಿಕವಾಗಿದೆ ಎಂದು ನಾಗರಿಕ ವೇದಿಕೆ ಆರೋಪಿಸಿದೆ.