ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಐಪಿಎಸ್ ಅಧಿಕಾರಿಯಾದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತರನ್ನು ಅವಮಾನಿಸಿ, ಹಗುರವಾಗಿ ಮಾತನಾಡಿದ ಹರಿಹರ ಶಾಸಕ ಬಿ.ಪಿ.ಹರೀಶ್ ಮತ್ತೊಬ್ಬರಿಗೆ ಮಾತನಾಡುವಾಗ ಮಾತಿನ ಮೇಲೆ ಹಿಡಿತ ಹೊಂದಿರಬೇಕು ಎಂದು ಹಿರಿಯ ವಕೀಲ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನ ಕಿವಿಮಾತು ಹೇಳಿದ್ದಾರೆ.ಶ್ರಮದಿಂದ ವಿದ್ಯಾಭ್ಯಾಸ ಮಾಡಿ ಐಪಿಎಸ್ ಮುಗಿಸಿ, ದಾವಣಗೆರೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಉಮಾ ಪ್ರಶಾಂತ ಪ್ರಾಮಾಣಕವಾಗಿ ಕಾರ್ಯ ನಿರ್ವಹಿಸಿದವರು. ಸಾರ್ವಜನಿಕ ಸೇವೆಗೆ ಬಂದ ಇಂತಹ ಒಬ್ಬ ನಿಷ್ಟಾವಂತ ಅಧಿಕಾರಿಣಿ ಬಗ್ಗೆ ಶಾಸಕ ಹರೀಶ ಹಗುರ ಮಾತನಾಡಿದ್ದು ಸರಿಯಲ್ಲ ಮೊದಲು ಹೆಣ್ಣು ಮಕ್ಕಳಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.
ನಿಮಗೂ ಜನ್ಮ ಕೊಟ್ಟವರು ಹೆಣ್ಣು ಎಂಬುದನ್ನು ಮರೆಯಬಾರದು. ಹಗುರವಾಗಿ ಯಾರ ಬಗ್ಗೆಯೂ ಮಾತನಾಡಬರಾದು. ಒಬ್ಬ ಅಧಿಕಾರಿ 60 ವರ್ಷ ಕಾಲ ವೃತ್ತಿಯಲ್ಲಿರುತ್ತಾರೆ. ನೀವು ಐದು ವರ್ಷಕ್ಕೊಮ್ಮೆ ನಿಮ್ಮ ಶಾಸಕ ಸ್ಥಾನ ಮುಗಿಯುತ್ತದೆ. ಆದರೆ, ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ನೀಡುವ ಗೌರವವನ್ನೇ ಇತರೆ ಮನೆಯ ಹೆಣ್ಣುಮಕ್ಕಳಿಗೂ ನೀಡಬೇಕು. ಒಬ್ಬ ಅಧಿಕಾರಿ ತಮ್ಮ ಕರ್ತವ್ಯ, ಸೇವೆ ಮಾಡುತ್ತಾರೆ. ನಿಮ್ಮನ್ನು ಕೇಳಿ ಹೇಗೆ ಕರ್ತವ್ಯ ಮಾಡಬೇಕೆಂದು ತಿಳಿಯುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.ಮೇಲಾಧಿಕಾರಿಗಳ ಆದೇಶ, ತಮ್ಮ ಕರ್ತವ್ಯವನ್ನು ಅಧಿಕಾರಿಗಳು ಮಾಡುತ್ತಾರೆ. ಅಂತಹವರ ಕರ್ತವ್ಯಕ್ಕೆ ನೀವು ಅಡ್ಡಿಪಡಿಸಿದ್ದಲ್ಲದೇ ಅವಮಾನಿಸಿದ್ದು ಎಸ್ಪಿ ಉಮಾ ಪ್ರಶಾಂತ ಗೌರವಕ್ಕೆ ಧಕ್ಕೆ ತಂದು, ಬೆದರಿಕೆ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ನಿಮ್ಮಂತಹವರಿಗೆ ಶಿಕ್ಷೆಯಾದರೆ ಯಾವುದೇ ಪ್ರಜಾಪ್ರತಿನಿಧಿ ಹಗುರವಾಗಿ ಮತ್ತೊಬ್ಬರಿಗೆ ಮಾತನಾಡುವುದಿಲ್ಲ. ಮಾತಾಡುವಾಗ ಮಾತಿನ ಮೇಲೆ ಹಿಡಿತವಿರಬೇಕು. ಎಲ್ಲರನ್ನೂ ನಿಮ್ಮ ಮನಸ್ಸಿನಂತೆ ನೋಡಬಾರದು. ಗೌರವದಲ್ಲಿ ಬದುಕಿ, ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಎಸ್ಪಿ ಉಮಾ ಪ್ರಶಾಂತ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಎಸ್ಪಿ ಉಮಾ ಪ್ರಶಾಂತರಿಗೆ ನಿಮ್ಮ ಮಾತಿನಿಂದ ನೋವಾಗಿದೆ. ಸಾರ್ವಜನಿಕರು ನಾವು ಅಧಿಕಾರಿಗಳ ಮನಸ್ಸಿಗೆ ನೋವಾಗದಂತೆ ಬೆಂಬವಾಗಿರಬೇಕು. ರಾಜಕಾರಣಿಗಳಿಗೆ ಟಿಕೆಟ್ ಬೇಕು ಎಂಬುದಾಗಿ ವರಿಷ್ಟರ ಮುಂದೆ ನಿಮ್ಮ ನಡೆ ಹೇಗಿರುತ್ತದೋ ಅದನ್ನೇ ಅಧಿಕಾರಿಗಳ ಮುಂದೆ ತೋರಿಸಬಾರದು. ನಿಮ್ಮ ಮನಸ್ಥಿತಿ ನಿಮ್ಮ ಹಿಡಿತದಲ್ಲಿರಬೇಕು. ನಿಮಗೆ ಶಿಕ್ಷೆಯಾಗಲಿ. ಶಿಕ್ಷಣದ ಆದಾರದಲ್ಲಿ ಎಂಪಿ, ಎಂಎಲ್‌ಎ, ಎಂಎಲ್‌ಸಿ, ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಲ್ಲುವಂತಹ ಕಾನೂನು ಜಾರಿಗೆ ತರಬೇಕಿದೆ ಎಂದು ಸರ್ಕಾರಕ್ಕೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.